
ಬೆಂಗಳೂರು, ಏ.೧೦-ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ದ್ವೇಷ ರಹಿತ, ಅಭಿವೃದ್ಧಿ ಶೀಲ ಚಿಂತನೆಯುಳ್ಳ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಮತೋಲನ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿಗಳು, ಚಿಂತಕರು, ಹೋರಾಟಗಾರರು ಕರೆ ನೀಡಿದ್ದಾರೆ.
ನಗರದಲ್ಲಿಂದು ಗಾಂಧಿಭವನ ಸಭಾಂಗಣದಲ್ಲಿ ಸೌಹಾರ್ದ ಕರ್ನಾಟಕ ಹಾಗೂ ವಿವಿಧ ಪ್ರಗತಿಪರ ಸಂಘಟನೆ ಆಯೋಜಿಸಿದ್ದ ಸಾರ್ವತ್ರಿಕ ಚುನಾವಣೆ, ಸಾರ್ವಜನಿಕ ಹೊಣೆ ವಿಚಾರ ಸಂಕಿರಣದಲ್ಲಿ ನಾಡಿನ ಹಲವು ಚಿಂತಕರು ಪಾಲ್ಗೊಂಡಿದ್ದರು.
ಆರಂಭದಲ್ಲಿ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ಜನತೆಯ ಪ್ರಶ್ನೆ ಮುನ್ನೆಲೆಗೆ ಬರುವ ಬದಲು ಜನಸಂಸ್ಕೃತಿಯನ್ನು ಹಾಳುಗೆಡಹುವ ದ್ವೇಷ ಮುಂಚೂಣಿಗೆ ಬರುತ್ತಿರುವುದು ಅಪಾಯಕಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಅದಾನಿಯನ್ನು ಕಟ್ಟಲು ಸಾಂಸ್ಕೃತಿಕ ರಾಜಕಾರಣ ಮಾಡುತ್ತಿರುವ ಪಕ್ಷವನ್ನು ಅಧಿಕಾರದಿಂದ ತೊಲಗಿಸಬೇಕು. ಸಂಸ್ಕೃತಿಯನ್ನು ಜನರು ಕಟ್ಟುತ್ತಾರೆ.
ಸಾಂಸ್ಕೃತಿಕ ರಾಜಕಾರಣವನ್ನು ರಾಜಕೀಯ ವ್ಯಕ್ತಿಗಳು ಮಾಡುತ್ತಿದ್ದಾರೆ.ಅದುವೇ ಮಂದಿರ ಮಸೀದಿ ಚರ್ಚ್‌ಗಳನ್ನು ಕಟ್ಟುವ ಪುರೋಹಿತಶಾಹಿ ರಾಜಕಾರಣ ಎಂದು ವಿಶ್ಲೇಷಣೆ ಮಾಡಿದರು.
ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಹಲವು ಕಾರಣಗಳಿಂದ ಸಾಮಾಜಿಕ ಅಪಮಾನ ಹೆಚ್ಚಿದೆ. ಅವಶ್ಯಕತೆಗೆ ತಕ್ಕ ಅವಕಾಶಬೇಕಿತ್ತು.ಆದರೆ, ಇದು ನಡೆದಿಲ್ಲ. ಬದಲಾಗಿ ಮೀಸಲಾತಿ ಸುದೀರ್ಘ ಚರ್ಚೆಯಲ್ಲಿದೆ. ಜಗಳ ಒಳಜಗಳ ಹಚ್ಚಲಾಗುತ್ತಿದೆ. ಬಡತನ, ಹಿಂದುಳಿದಿರುವಿಕೆ, ತಾರತಮ್ಯ ಹೆಚ್ಚುತ್ತಿದೆ ಎಂದರು.
ಮುಸ್ಲಿಮರು, ದಲಿತರು, ಮಹಿಳೆಯರುಗಳಿಗೆ ಸೋಶಿಯಲ್ ಸಿಂಪಥಿ ಇಲ್ಲದ ಸಮುದಾಯವಾಗಿಸಲಾಗಿದೆ. ಇಂದಿನ ಸರ್ಕಾರ ನಡೆಸುವವರು ಬ್ರಾಹ್ಮಣಶಾಹಿ ಸರ್ವಾಧಿಕಾರಿ ಸ್ಥಾಪನೆಗೆ ಮುಂದಾಗಿದ್ದಾರೆ. ಹಾಗಾಗಿ ಸಮತೋಲನ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದು ಕರೆ ನೀಡಿದರು.
ಸಿಐಟಿಯು ಕಾರ್ಯದರ್ಶಿ ಕೆ.ಎನ್.ಉಮೆಶ್ ಮಾತನಾಡಿ, ಚುಚ್ಚುವ ಸಂಕಟಗಳು ಎಲ್ಲಾ ಜನವಿಭಾಗಗಳಿಗೆ ಎದುರರಾಗಿವೆ. ಆದರೆ, ಸಂಕಟವನ್ನೇ ಸಂಭ್ರಮಿಸುವ ವ್ಯವಸ್ಥೆಯನ್ನು ಸೃಷ್ಟಿ ಮಾಡಲಾಗಿದೆ. ಶ್ರಮ ಮಾನದನ್ ಎಂಬ ಡಂಬಾಚಾರದ ಯೋಜನೆ ಕೊಟ್ಟು ಕೊಟ್ಟು ಶ್ರಮ ಏವ ಜಯತೆ ಎಂದು ಹೆಗ್ಗಳಿಸಿಕೊಳ್ತಾರೆ ಎಂದು ಟೀಕಿಸಿದರು.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ವಹಿಸಿದ್ದರು. ಸಾಹಿತಿ ಡಾ.ಕೆ.ಶರೀಫಾ ಸೇರಿದಂತೆ ಪ್ರಮುಖರಿದ್ದರು.