ಅಭಿವೃದ್ಧಿ ಕೆಲಸಗಳ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ

ಕೆ.ಆರ್.ಪೇಟೆ.ನ.21: ತಾಲ್ಲೂಕಿನ ಶೀಳನೆರೆ ಹೋಬಳಿಯ ಹೆಮ್ಮನಹಳ್ಳಿ, ಹೊನ್ನೇನಹಳ್ಳಿ, ಊಚನಹಳ್ಳಿ, ಹಿರಳಹಳ್ಳಿ, ಮಂಚನಹಳ್ಳಿ, ಚಟ್ಟೇನಹಳ್ಳಿ, ಬೇಲದಕೆರೆ, ನವಿಲುಮಾರನಹಳ್ಳಿ, ಕಾಗೇಪುರ, ಬೆಣ್ಣೇಕೊಪ್ಪಲು, ಶೀಳನೆರೆ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮಾನಾಡಿ ಕೆ.ಆರ್.ಪೇಟೆ ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸಿ ಸಾಧಿಸಿ ತೋರಿಸುವುದಾಗಿ ಹೇಳಿದರು.
ನನ್ನದು ಅಭಿವೃದ್ಧಿಯ ಮೂಲಮಂತ್ರವಾಗಿರುವುದರಿಂದ ಟೀಕೆಟಿಪ್ಪಣಿಗಳಿಗೆ ಜಗ್ಗದೇ ಅಭಿವೃದ್ಧಿ ಕೆಲಸಗಳ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡುತ್ತೇನೆ. ಏಕೆಂದರೆ ಟೀಕೆಗಳು ಸಾಯುತ್ತವೆ ಆದರೆ ನಾವು ಕೈಗೊಳ್ಳುವ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿದು ತಾಲ್ಲೂಕಿನ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತವೆ ಎಂದು ಸಚಿವ ನಾರಾಯಣಗೌಡ ಅಭಿಪ್ರಾಯಪಟ್ಟರು.
ನಾನು ಹಣ ಆಸ್ತಿ ಮಾಡಲು ರಾಜಕೀಯಕ್ಕೆ ಬಂದಿಲ್ಲ, ಜನತೆಯ ಸೇವೆ ಮಾಡಲು ದೊರಕಿರುವ ಅಧಿಕಾರವನ್ನು ಜನತೆಯ ಸೇವೆಗೆ ಸದ್ಭಳಕೆ ಮಾಡಿಕೊಳ್ಳುತ್ತೇನೆ. ನನಗೆ ಶಾಸಕ ಮಂತ್ರಿಯೆಂಬ ಅಹಂಕಾರವಿಲ್ಲ, ನನಗೆ ರಾಜಕೀಯ ಶಕ್ತಿ ನೀಡಿದ ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಯ ವಿನಮ್ರ ಸೇವಕನಾಗಿದ್ದೇನೆ ಎಂದು ಅಭಿಮಾನದಿಂದ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್,ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಮುಖಂಡರಾದ ಹೆಮ್ಮನಹಳ್ಳಿ ರಮೇಶ್, ಕರೋಟಿ ಅನಿಲ್,ಅರೆಬೊಪ್ಪನಹಳ್ಳಿ ಸುನಿಲ್, ಆಪ್ತಸಹಾಯಕ ದಯಾನಂದ, ಸುಬ್ರಮಣ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು..