ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕಿಲ್ಲ

ಬೀದರ್: ಮಾ.18:ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಿಲ್ಲ ಎಂದು ಮುಖಂಡ ದೀಪಕ ಪಾಟೀಲ ಚಾಂದೋರಿ ಹೇಳಿದ್ದಾರೆ.

ಔರಾದ್ ತಾಲ್ಲೂಕಿನ ಹಂಗರಗಾ-ಸಾವರಗಾಂವ್ ಮಧ್ಯೆ ಕೆಕೆಆರ್‍ಡಿಬಿಯ ರೂ. 69 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಟೆಂಡರ್‍ನಲ್ಲಿ ನಡೆದ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಸಂತ ಬಿರಾದಾರ ಕೆಲವರು ಸಚಿವರ ಅಭಿವೃದ್ಧಿ ಕಾರ್ಯಗಳಿಗೆ ತಡೆ ಒಡ್ಡುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ, ಅವ್ಯವಹಾರ ಪ್ರಶ್ನಿಸುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಾನು ಸಾರ್ವಜನಿಕರ ಹಿತ ಹಾಗೂ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ್ದೆ. ವೈಯಕ್ತಿಕ ಟೀಕೆ ಮಾಡಿಲ್ಲ. ಬ್ರಿಡ್ಜ್ ಕಂ ಬ್ಯಾರೇಜ್ ಸ್ಥಳ ಅವೈಜ್ಞಾನಿಕವಾಗಿರುವ ಕಾರಣ ಮೂಲ ಸೌಕರ್ಯಕ್ಕೆ ಬಳಸಬೇಕಾದ ಕೆಕೆಆರ್‍ಡಿಬಿಯ ದೊಡ್ಡ ಮೊತ್ತ ಪೋಲು ಮಾಡಬಾರದು ಎಂದು ಹೇಳಿದ್ದೆ. ತಾಂತ್ರಿಕ ತಂಡದ ವರದಿ ಸರಿಯಾಗಿಲ್ಲ. ತಾಂತ್ರಿಕ ಬಿಡ್‍ನಲ್ಲಿ ಅರ್ಹರಲ್ಲದ ಮೂವರು ಗುತ್ತಿಗೆದಾರರನ್ನು ಪರಿಗಣಿಸಿ ಟೆಂಡರ್‍ನಲ್ಲಿ ಅವ್ಯಹಾರ ಎಸಗಲಾಗಿದೆ. ಇದರಿಂದ ಮಹಾರಾಷ್ಟ್ರಕ್ಕೆ ಅನುಕೂಲವಾಗಲಿದೆ ಎಂದು ವಾದ ಮಂಡಿಸಿದ್ದೆ. ಸ್ಥಳ ಪುನರ್ ಪರಿಶೀಲಿಸಲು ಒತ್ತಾಯಿಸಿದ್ದೆ ಎಂದು ತಿಳಿಸಿದ್ದಾರೆ.

ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳ ಸರಿಯಾಗಿದ್ದರೆ, ಟೆಂಡರ್‍ನಲ್ಲಿ ಅವ್ಯವಹಾರ ನಡೆದಿರದಿದ್ದರೆ, ಗುತ್ತಿಗೆದಾರರು ಅರ್ಹರಾಗಿದ್ದರೆ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ನಿರೂಪಿಸಬೇಕಿತ್ತು. ಅದನ್ನು ಬಿಟ್ಟು ಜನರ ದಾರಿ ತಪ್ಪಿಸಲು ಸಚಿವರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಲಾಗುತ್ತಿದೆ ಎಂದು ಆರೋಪಿಸಿರುವುದು, ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬ್ಯಾರೇಜ್‍ನಿಂದ 5 ಸಾವಿರ ಎಕರೆ ಭೂಮಿ ಹಾಗೂ 25 ಸಾವಿರ ಜನರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ. ಯಾವ ಊರಿನ ಎಷ್ಟು ಜಮೀನಿಗೆ ಅನುಕೂಲವಾಗಲಿದೆ ಎನ್ನುವ ಪಟ್ಟಿ ಕೊಡಬೇಕು. ನೀರು ಸಂಗ್ರಹ ಮೂಲ ತಿಳಿಸಬೇಕು. ಮಹಾರಾಷ್ಟ್ರಕ್ಕೆ ಲಾಭವಾಗುವುದಿಲ್ಲ ಎಂದಾದರೆ, ಅಲ್ಲಿಂದ ಮಹಾರಾಷ್ಟ್ರ ಎಷ್ಟು ದೂರವಿದೆ, ಆನ್‍ಲೈನ್ ಟೆಂಡರ್‍ಗೆ ನಿಯಮಗಳು ಅನ್ವಯಿಸುವುದಿಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜೆಜೆಎಲ್‍ಎಂ ಗುತ್ತಿಗೆಯನ್ನು ಬೇರೆ ಜಿಲ್ಲೆಯವರು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಸ್ಥಳದಲ್ಲಿ ನಿಂತುಕೊಂಡು ಕೆಲಸ ನಿರ್ವಹಿಸುತ್ತಿರುವುದು ಯಾರು, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಕಾಣುವುದಿಲ್ಲವೇ ಎಂದು ಪ್ರಶ್ನೆ ಹಾಕಿದ್ದಾರೆ.

ಕೆಲವರು ಸಚಿವರಿಂದ ಲಾಭ ಪಡೆದಿದ್ದಾರೆ ಎಂದು ಬಿರಾದಾರ ಪ್ರಸ್ತಾಪಿಸಿದ್ದಾರೆ. ನಾನು ಬ್ಯಾರೇಜ್‍ಗೆ ಸಂಬಂಧಿಸಿದಂತೆ ಮಾತ್ರ ಮಾತನಾಡಿದ್ದೇನೆ. ವೈಯಕ್ತಿಕ ಟೀಕೆಗೆ ಹೆದರಲ್ಲ. ಯಾರು ಯಾರಿಂದ, ಯಾವ ರೀತಿ ಲಾಭ ಪಡೆದಿದ್ದಾರೆ, ಮೊದಲು ಏನಿದ್ದರು, ಈಗ ಏನಾಗಿದ್ದಾರೆ, 2008- 2013 ರಲ್ಲಿ ಯಾರು ಯಾವ ಪಕ್ಷದಲ್ಲಿದ್ದರು, ಬಿಜೆಪಿಯ ಹಿರಿಯ ಕಾರ್ಯಕರ್ತರ ಹಕ್ಕು ಕಸಿದುಕೊಂಡು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಯಾರಾದರು ಅದನ್ನೆಲ್ಲ ಮತ್ತೊಂದು ವೇದಿಕೆಯಲ್ಲಿ ಚರ್ಚಿಸೋಣ. ಜನರಿಗೂ ಸತ್ಯಾಸತ್ಯತೆ ಗೊತ್ತಾಗಲಿ ಎಂದು ಹೇಳಿದ್ದಾರೆ.

ಸಚಿವ ಚವಾಣ್ ಅವರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಬಹಿರಂಗ ಚರ್ಚೆಗೆ ನಾನು ಸದಾ ತಯಾರಿದ್ದೇನೆ. ಸ್ಥಳ ಹಾಗೂ ದಿನಾಂಕ ಅವರು ನಿಗದಿಪಡಿಸಲಿ. ದಾಖಲೆಗಳೊಂದಿಗೆ ಅಲ್ಲಿಗೆ ಬರಲು ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.