ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯವಾಗದಿರಲಿ: ಸೂರ್ಯಕಾಂತ ನಾಗಮಾರಪಳ್ಳಿ

ಬೀದರ:ಮಾ.17:ಅಭಿವೃದ್ಧಿ ಕೆಲಸಗಳನ್ನು ರಾಜಕೀಯ ರಹಿತವಾಗಿ ಮಾಡಬೇಕೆನ್ನುವ ಮನೋಭಾವನೆ ಮುಖಂಡರಲ್ಲಿ ಬೆಳೆಯಬೇಕಿದೆ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮಾರ್ಚ್ 16ರಂದು ಬೀದರ ಅಭಿವೃದ್ಧಿ: ಸಂದಿಗ್ಧತೆಗಳು-ಮುನ್ನೋಟಗಳು ಕುರಿತ ಗೋಷ್ಠಿಯಲ್ಲಿ ಆಶಯಗಳನ್ನು ವ್ಯಕ್ತಪಡಿಸಿದರು.

ಬೀದರ ಜಿಲ್ಲೆ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಕೈಗಾರಿಕೆಗಳನ್ನು ತಂದು ಯುವ ಜನಾಂಗದವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವ ದಿಶೆಯಲ್ಲಿ ಪ್ರಮಾಣಿಕ ಪ್ರಯತ್ನಗಳು ನಡೆಯಬೇಕು. ಉದ್ದಿಮೆದಾರರನ್ನು ಆಕರ್ಷಿಸಿ ಹೊಸ ಉದ್ದಿಮೆಗಳನ್ನು ಜಿಲ್ಲೆಗೆ ತರುವ ಪ್ರಯತ್ನಗಳಾಗಬೇಕು ಎಂದರು.

ಬೀದರ ಜಿಲ್ಲೆಯಲ್ಲಿ ಸಾಕಷ್ಟು ನೀರನ್ನು ನಿಲ್ಲಿಸುವ ಅವಕಾಶಗಳಿವೆ. ಹೊಸ ಯೋಜನೆಗಳನ್ನು ಬೀದರ ಜಿಲ್ಲೆಗೆ ತಂದು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕಿದೆ. ಸಮಾಜ ನನಗೇನು ನೀಡಿದೆ ಎನ್ನುವುದನ್ನು ಆಲೋಚಿಸದೇ ನಾನು ಸಮಾಜಕ್ಕೆ ಏನನ್ನು ನೀಡಿದ್ದೇನೆ ಎನ್ನುವ ಬಗ್ಗೆ ಆಲೋಚಿಸಿ ಕೆಲಸ ಮಾಡಬೇಕು. ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಇನ್ನಷ್ಟು ಅಭಿವೃದ್ದಿ ಕೆಲಸಗಳಾಗಬೇಕಿದೆ. ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬೆಳವಣಿಗೆಯಾಗಬೇಕು. ಜಾತಿ, ಬೇಧಗಳನ್ನು ಮರೆತು ಬೀದರ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಯತ್ನಗಳು ನಡೆಸಬೇಕಿದೆ ಎಂದು ಹೇಳಿದರು.

ಉದ್ಯಮಿಗಳಾದ ಬಸವರಾಜ ಧನ್ನೂರ ಅವರು ಮಾತನಾಡಿ, ಬೀದರ ಜಿಲ್ಲಾ ಕೇಂದ್ರದಲ್ಲಿ ಆಡಳಿತ ಸಂಕೀರ್ಣ ಇನ್ನೂ ಆಗಿಲ್ಲ. ಈ ಬಗ್ಗೆ ಗಮನ ಹರಿಸಬೇಕು. ವಿಮಾನಯಾನ ಸೇವೆ ಇದೆಯಾದರೂ ಸಮರ್ಪಕವಾಗಿಲ್ಲ. ಕೈಗಾರಿಕೆಗಳ ಅಭಿವೃದ್ಧಿ ಕುರಿತಂತೆಯೂ ಇನ್ನಷ್ಟು ಪರಿಣಾಮಕಾರಿಯಾದ ಪ್ರಯತ್ನಗಳು ನಡೆಯಬೇಕು. ಎಂದರು.

ಈ ಸಂದರ್ಭದಲ್ಲಿ sಗುಲ್ಬರ್ಗಾ ವಿಶ್ವವಿದ್ಯಾಲದ ವಿಶ್ರಾಂತ ಕುಲಪತಿಗಳಾದ ಪ್ರೊ.ಬಿ.ಜಿ ಪಾಟೀಲ ಅವರು ಅಭಿವೃದ್ಧಿ ಕುರಿತಂತೆ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಗೌತಮ ಅರಳಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಬೀದರ ಜಿಲ್ಲಾ ಸಮಗ್ರ ಅಭಿವೃದ್ಧಿ ವೇದಿಕೆಯ ಶ್ರೀಕಾಂತ ಸ್ವಾಮಿ, ಮುಖಂಡರಾದ ಆನಂದ ದೇವಪ್ಪ, ಮಾರುತಿ ಬೌದ್ದೆ, ಅನೀಲ ಬೆಲ್ದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.