ಅಭಿವೃದ್ಧಿ ಕುರಿತು ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ: ಡಿ.ಕೆ.ಶಿ ಸವಾಲು

ತಿ.ನರಸೀಪುರ: ಫೆ.21:- ಪಂಚವಾರ್ಷಿಕ ಯೋಜನೆ, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಕಾಯ್ದೆ ,ಸರ್ಕಾರಿ ಸ್ವಾಮ್ಯದ ತಾಂತ್ರಿಕ ವಿದ್ಯಾಲಯಗಳ ನಿರ್ಮಾಣ ಸೇರಿದಂತೆ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹೆಚ್ಚು ಕೊಡುಗೆ ನೀಡಿದ್ದು, ಅಭಿವೃದ್ಧಿ ತಮ್ಮಿಂದ ಮಾತ್ರ ಸಾಧ್ಯ ಎನ್ನುವ ಬಿಜೆಪಿ ಪಕ್ಷ ತಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ತಾಲೂಕಿನ ಬನ್ನೂರು ಪಟ್ಟಣದ ರತ್ನಮಹಲ್ ಚಿತ್ರಮಂದಿರದ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಪ್ರಜಾಧ್ವನಿ”ಯಾತ್ರೆಯಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಅಲ್ಲದೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ್ವವನ್ನೇ ಹರಿಸಿದೆ.ಎಸ್.ಎಂ.ಕೃಷ್ಣ ಅಧಿಕಾರಾಧಿಯಲ್ಲಿ ಬಿಸಿಯೂಟ,ಸ್ತ್ರೀಶಕ್ತಿ ಸಂಘಗಳ ನಿರ್ಮಾಣ,ಬಂಗಾರಪ್ಪ ಅವಧಿಯಲ್ಲಿ ಉಚಿತ ವಿದ್ಯುತ್,ಡಿ.ದೇವರಾಜಅರಸ್ ಅವರ ಕಾಲದಲ್ಲಿ ಉಳುವವನೇ ಭೂಮಿ ಒಡೆಯ ಮತ್ತು ಬಗರ್ ಉಕುಂ, ಆರಾಧನಾ ಯೋಜನೆ,ಸಿದ್ದರಾಮಯ್ಯ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗಳು ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ.ಆದರೆ,ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ಯಾವ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ದೇಶದ ಜನರ ಮುಂದೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. 2023ರ ವಿಧಾನ ಸಭೆ ಚುನಾವಣೆಯಲ್ಲಿ ಕರ್ನಾಟಕದ ಜನತೆ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಗೆ ಉಚಿತ 200 ಯೂನಿಟ್ ವಿದ್ಯುತ್,ಪ್ರತಿ ಕುಟುಂಬದ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳಿಗೆ 2000ರೂಗಳನ್ನು ನಗದು ವರ್ಗಾವಣೆ ಮಾಡಲು ನಿರ್ಧರಿಸಿದೆ.ಹಾಗಾಗಿ ಎಲ್ಲ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.2013ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ.ಮುಂದೆ ಅಧಿಕಾರಕ್ಕೆ ಬಂದಲ್ಲಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯಲಿದೆ.ಇಲ್ಲವಾದಲ್ಲಿ ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಪಣತೊಟ್ಟರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ,ಜನತೆ ಶ್ರೇಯಸ್ಸನ್ನು ಬಯಸಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ.ರಾಜ್ಯದ ಜನತೆ ಬಿಜೆಪಿ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರ,ಬಿಜೆಪಿ ಸರ್ಕಾರಗಳು ಕೈಗೊಂಡ ಯೋಜನೆಗಳನ್ನು ಪರಾಮರ್ಶಿಸುತ್ತಿದ್ದು,ಈ ಎರಡು ಪಕ್ಷಗಳು ಜನರ ಹಿತ ಕಾಯಲು ಆಸಕ್ತಿ ತೋರಿಸುತ್ತಿಲ್ಲ ಎಂದು ರಾಜ್ಯದ ಜನತೆಗೆ ಮನವರಿಕೆಯಾಗಿದೆ.ಹಾಗಾಗಿ ರಾಜ್ಯದ ಜನತೆ ಬದಲಾವಣೆ ಬಯಸಿದ್ದು,ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆಯಿದೆ.2024ರ ಸಂಸತ್ ಚುನಾವಣೆ ವೇಳೆಗೆ ಕಾಂಗ್ರೆಸ್ ಅಲೆ ದೇಶವನ್ನೆಲ್ಲ ಪಸರಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ವಸತಿ ಯೋಜನೆಯ ಮಾಜಿ ಅಧ್ಯಕ್ಷ ಸುನಿಲ್ ಬೋಸ್ ಮಾತನಾಡಿ,ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷವನ್ನು ಹಲವು ಬಾರಿ ಬೆಂಬಲಿಸಿದ್ದೀರಿ.ನಮ್ಮ ತಂದೆಯವರು ಕ್ಷೇತ್ರದ ಜನರ ಅಪೇಕ್ಷೆ ಮೇರೆಗೆ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ.ಕಳೆದ ಚುನಾವಣೆಯ ಹಿನ್ನೆಡೆಯನ್ನು ಬದಿಗಿಟ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕಡೆ ಕಾರ್ಯಕರ್ತರು ಪಣತೊಡಬೇಕಿದೆ ಎಂದರು.
ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅನಿಲ್ ಕುಮಾರ್,ಶಾಸಕ ಯತೀದ್ರ ಸಿದ್ದರಾಮಯ್ಯ,ಮಾಜಿ ಶಾಸಕ ಎಚ್ .ಎಂ.ರೇವಣ್ಣ,ಕಾಂಗ್ರೆಸ್ ವಕ್ತಾರ ವಿ .ಎಸ್ .ಉಗ್ರಪ್ಪ,ವಿಧಾನ ಪರಿಷತ್ ಸದಸ್ಯ ಡಾ .ತಿಮ್ಮಯ್ಯ,ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ .ಪುಷ್ಪ ಅಮರನಾಥ್ ,ಮಾಜಿ ಶಾಸಕರಾದ ವಿ .ಸುನಿತಾ ವೀರಪ್ಪಗೌಡ ,ಎಸ್ .ಕೃಷ್ಣಪ್ಪ ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ .ಎಂ .ರಾಮು ,ಮರಿಗೌಡ ,ಮಾಜಿ ಜಿ.ಪಂ .ಸದಸ್ಯೆ ಸುಧಾ ಮಹದೇವಯ್ಯ,ಮೈಮುಲ್ ನಿರ್ದೇಶಕ ಚೆಲುವರಾಜು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ .ಬಸವರಾಜು ,ಚನ್ನಕೇಶವ,ಹಿಂದುಳಿದ ವರ್ಗಗಳ ಅಧ್ಯಕ್ಷ ಎ.ಎನ್.ಸ್ವಾಮಿ ,ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ಕೃಷ್ಣ ,ಮಾಜಿ ಸದಸ್ಯ ಸಿದ್ದೇಗೌಡ ,ಮಾಜಿ ಪೀಕಾರ್ಡ್ ಅಧ್ಯಕ್ಷ ವಜ್ರೇಗೌಡ ,ಬನ್ನೂರು ರವೀಂದ್ರ ಕುಮಾರ್ ,ಜ್ಞಾನಪ್ರಕಾಶ್ ,ಮುನಾವರ್ ಪಾಶ ,ಲಕ್ಷ್ಮಿ ನಾರಾಯಣ್ ,ಪದ್ಮನಾಭ ಇತರರು ಹಾಜರಿದ್ದರು.