ಅಭಿವೃದ್ಧಿ ಕಾರ್ಯ ಶೂನ್ಯ

ಮುಧೋಳ,ಮೇ26 : ರಾಜ್ಯ ಸರ್ಕಾರ ಒಂದು ವರ್ಷ ಆಡಳಿತ ಪೂರೈಸಿ ಸಂಭ್ರಮಾಚರಣೆಯಲ್ಲಿದೆ, ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗದೇ ಇರುವುದರಿಂದ ಶೂನ್ಯ ಸಾಧನೆಯಾಗಿದ್ದು ಶೋಕಾಚರಣೆ ಆಚರಿಸುವುದು ಉತ್ತಮ ಎಂದು ಮುಧೋಳ ಗ್ರಾಮೀಣ ಮಂಡಳದ ಅಧ್ಯಕ್ಷ ಸಂಗಣ್ಣಾ ಕಾತರಕಿ ವ್ಯಂಗ್ಯವಾಗಿ ಲೇವಡಿ ಮಾಡಿದರು.
ಅವರು ನಗರದ ಕಾನಿಪ ಕಾರ್ಯಾಲಯದಲ್ಲಿ ನಡೆಸಲಾದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಮುಧೋಳ ಮತಕ್ಷೇತ್ರಕ್ಕೆ ಇಲ್ಲಿಯವರೆಗೂ ಒಂದು ರೂಪಾಯಿ ಅನುದಾನ ಬಂದಿಲ್ಲ. ಹಿಂದಿನ ಸಚಿವ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಂದ ಅನುದಾನದಲ್ಲಿಯೇ ಈಗ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಅವರು ಮಾಡಿದ ಭೂಮಿಪೂಜೆಗಳನ್ನೇ ಮತ್ತೆ ಇವರು ಪೂಜೆ ಮಾಡುತ್ತಾ ಹೊರಟಿದ್ದಾರೆ ಎಂಬುದು ಹಾಸ್ಯಾಸ್ಪದದ ಸಂಗತಿಯಾಗಿದೆ ಎಂದರು.
ನಗರ ಮಂಡಳದ ಅಧ್ಯಕ್ಷ ಕರಬಸಯ್ಯ ಹಿರೇಮಠ ಮಾತನಾಡಿ, ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷವಾದರೂ ಇಲ್ಲಿಯವರೆಗೂ ನಗರಸಭೆಗೆ ಯಾವುದೇ ರೀತಿಯ ಅನುದಾನ ಬಂದಿಲ್ಲ. ಯಾವುದೇ ಕೆಲಸ ಕಾರ್ಯಗಳಾಗಿಲ್ಲ. ಬಿಜೆಪಿ ಅಧಿಕಾರವಧಿಯಲ್ಲಿ ಸ್ವಚ್ಛತೆಗೆ ನಗರಸಭೆ ಗುರುಪಾದ ಕುಳಲಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿಗಳಿಂದ ಸ್ವಚ್ಛತೆಗಾಗಿ ಪ್ರಶಸ್ತಿ ಪಡೆದಿತ್ತು. ಆದರೆ ಈಗ ಮುಧೋಳ ನಗರದಲ್ಲಿ ಸ್ವಚ್ಛತೆಯೇ ಇಲ್ಲವಾಗಿದೆ ಎಂದು ಆರೋಪಿಸಿದರು.
ಮೀನುಗಾರರ ರಾಜ್ಯ ಪ್ರಕೋಷ್ಠದ ಸಂಚಾಲಕ ನಾಗಪ್ಪ ಅಂಬಿ ಮಾತನಾಡಿ, ಮೀನುಗಾರರಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಸಾಲ ಸೌಲಭ್ಯ ನೀಡಿಲ್ಲ. ರೈತ ವಿದ್ಯಾನಿಧಿ ಬಂದಾಗಿದೆ. ರೈತಾಪಿ ಜನಕ್ಕೆ ಕೃಷಿ ಸಲಕರಣೆ ನೀಡಿಲ್ಲ. ರೈತರ ಬದುಕು ಇಂದು ತುಂಬಾ ಕಷ್ಟಕರವಾಗಿದೆ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವ ಮೂಲಕ ಮತ ಹಾಕಿಸಿಕೊಂಡು ಅಧಿಕಾರಕ್ಕೆ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಡಾ.ರವಿ ನಂದಗಾಂವ, ಶ್ರೀಶೈಲ ಚಿನ್ನಣ್ಣವರ, ರುದ್ರಪ್ಪ ಅಡವಿ ಉಪಸ್ಥಿತರಿದ್ದರು.