ಅಭಿವೃದ್ಧಿ ಕಾರ್ಯ ನಿರ್ಲಕ್ಷ್ಯ ಶಾಸಕರ ಅತೃಪ್ತಿ

BJP Meeting

2ನೇ ದಿನ ಸಭೆ
ಬೆಂಗಳೂರು, ಜ. ೫- ಬಜೆಟ್ ತಯಾರಿಗೆ ಶಾಸಕರಿಂದ ಸಲಹೆ ಪಡೆಯುವ ಸಭೆಯಲ್ಲಿ ಶಾಸಕರ ವಿಶ್ವಾಸವನ್ನು ಗೆಲ್ಲುವ ಕಸರತ್ತು ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ೨ನೇ ದಿನವಾದ ಇಂದು ಸಹ ಹಲವು ಜಿಲ್ಲೆಗಳ ಬಿಜೆಪಿ ಶಾಸಕರುಗಳ ದೂರು ದುಮ್ಮಾನ, ಕುಂದುಕೊರತೆಗಳು, ಸಂಕಷ್ಟಗಳನ್ನು ಆಲಿಸಿದರು.
ಸರ್ಕಾರದಲ್ಲಿ ತಾವು ಹೇಳಿದ ಕೆಲಸಗಳು ಆಗುತ್ತಿಲ್ಲ, ಸಚಿವರುಗಳು ತಮ್ಮ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಶಾಸಕರುಗಳ ದೂರುಗಳು ಇಂದೂ ಮುಂದುವರೆದಿದ್ದು, ನಮ್ಮದೇ ಸರ್ಕಾರ ಇದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗದಿರುವ ಬಗ್ಗೆ ಬಹುತೇಕ ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬಜೆಟ್ ತಯಾರಿಯ ಶಾಸಕರ ಸಭೆಯ ಮೊದಲ ದಿನವಾದ ನಿನ್ನೆ ಸಹ ಕಲ್ಯಾಣ ಕರ್ನಾಟಕ, ಬೆಳಗಾವಿ, ಬಿಜಾಪುರ, ಮಧ್ಯ ಕರ್ನಾಟಕ, ಕರಾವಳಿ ಭಾಗದ ಶಾಸಕರುಗಳು ಸರ್ಕಾರದ ಮಟ್ಟದಲ್ಲಿ ತಮ್ಮ ಕೆಲಸವಾಗದ ಬಗ್ಗೆ, ಸಚಿವರುಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳು ತಮ್ಮ ಅಹವಾಲುಗಳಿಗೆ ಸ್ಪಂದಿಸದ ಬಗ್ಗೆ ದೂರುಗಳ ಸುರಿಮಳೆಗೈದಿದ್ದರು.
ಇಂದು ಚಿಕ್ಕಮಗಳೂರು, ಮೈಸೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಮಂಡ್ಯ, ಕೋಲಾರ, ತುಮಕೂರು ಜಿಲ್ಲೆಗಳ ಬಿಜೆಪಿ ಶಾಸಕರ ಸಭೆಯಲ್ಲೂ ಶಾಸಕರ ಕೆಲಸವಾಗದ ಬಗ್ಗೆ, ಅಭಿವೃದ್ಧಿ ಕಾರ್ಯಗಳು ನಡೆಯದ ಬಗ್ಗೆ ಅಸಮಾಧಾನ, ಅತೃಪ್ತಿಗಳು ಸ್ಫೋಟಗೊಂಡವು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರುಗಳು ಪಾಲ್ಗೊಂಡು ಶಾಸಕರ ದೂರು ದುಮ್ಮಾನಗಳನ್ನು ಆಲಿಸಿದರು.
ಮುಖ್ಯಮಂತ್ರಿಗಳ ಎದುರೇ ಬಹುತೇಕ ಶಾಸಕರು ಸಚಿವರುಗಳ ವರ್ತನೆ, ನಡವಳಿಕೆಗಳನ್ನು ತರಾಟೆಗೆ ತೆಗೆದುಕೊಂಡು ಶಾಸಕರಿಗೆ ಕಿಮ್ಮತ್ತು ನೀಡುವ ಪಾಠವನ್ನು ಕೆಲಸ ಸಚಿವರಿಗೆ ಹೇಳಿ ಒತ್ತಾಯಿಸಿದರು ಎನ್ನಲಾಗಿದೆ.
ನಿನ್ನೆಯಂತೆ ಇಂದು ಸಹ ಬಹುತೇಕ ಶಾಸಕರು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡದ ಬಗ್ಗೆಯೇ ಪ್ರಸ್ತಾಪಿಸಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬೇಕು. ಹಾಗಾಗಿ ಅನುದಾನ ನೀಡಿ ಎಂಬ ಬೇಡಿಕೆಯನ್ನು ಇಟ್ಟರು.
ವರ್ಗಾವಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಸಚಿವರುಗಳಿಗೆ ಶಿಫಾರಸ್ಸು ಪತ್ರ ನೀಡಿದರೂ ಅದಕ್ಕೆ ಕಿಮ್ಮತ್ತು ಸಿಗುತ್ತಿಲ್ಲ. ಆಡಳಿತ ಪಕ್ಷದ ಶಾಸಕರಾದ ನಮ್ಮ ಪತ್ರಗಳಿಗೆ ಬೆಲೆ ಇಲ್ಲ ಎಂದರೆ ಹೇಗೆ, ಸಚಿವರಿಗೆ ಸೂಕ್ತ ನಿರ್ದೇಶನ ನೀಡಿ ಹಲವು ಶಾಸಕರು ಮನವಿ ಮಾಡಿದರು.
ಬಜೆಟ್‌ನಲ್ಲಿ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒದಗಿಸುವಂತೆಯೂ ಶಾಸಕರುಗಳು ಕೋರಿದರು.
ಸಚಿವರುಗಳು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರಾದ ನಮಗೆ ಮಾಹಿತಿಯೇ ಇರುವುದಿಲ್ಲ. ಇದರಿಂದ ಕ್ಷೇತ್ರಗಲಲ್ಲಿ ಮುಜುಗರಕ್ಕೆ ಒಳಗಾಗುತ್ತಿದ್ದೇವೆ. ಸಚಿವರುಗಳ ಪ್ರವಾಸದ ಬಗ್ಗೆ ಶಾಸಕರುಗಳಿಗೆ ಮೊದಲೇ ಮಾಹಿತಿ ನೀಡುವ ವ್ಯವಸ್ಥೆ ಜಾರಿ ಮಾಡಿ. ಹಾಗೆಯೇ ಸಚಿವರುಗಳ ಪ್ರವಾಸದ ವೇಳೆ ಶಾಸಕರುಗಳನ್ನು ಕರೆದೊಯ್ಯುವಂತೆ ಸಚಿವರಿಗೆ ತಾಕೀತು ಮಾಡಿ ಎಂದು ಹಲವು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಎಲ್ಲವನ್ನೂ ಸರಿಪಡಿಸುವ ಭರವಸೆ
ಶಾಸಕರುಗಳ ದೂರು ದುಮ್ಮಾನಗಳನ್ನು ಆಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿ ಕೋವಿಡ್ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಭರವಸೆಯನ್ನು ನೀಡಿದರು.
ಶಾಸಕರುಗಳ ಶಿಫಾರಸ್ಸು ಪತ್ರಗಳಿಗೆ ಆದ್ಯತೆ ನೀಡುವಂತೆ ಸಚಿವರುಗಳಿಗೆ ನಿರ್ದೇಶನ ನೀಡುವುದಾಗಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿ, ಸಚಿವರುಗಳಿಂದ ಕೆಲಸ ಆಗದಿದ್ದರೆ ನೇರವಾಗಿ ನಮ್ಮ ಬಳಿ ಬನ್ನಿ, ಕೆಲಸ ಮಾಡಿಸಿಕೊಡುವ ಜವಾಬ್ದಾರಿ ತಮ್ಮದು ಎಂದು ಹೇಳಿ ಶಾಸಕರ ಅಸಮಾಧಾನವನ್ನು ತಣಿಸುವ ಕೆಲಸವನ್ನು ಮಾಡಿದರು.