ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ: ಎಸ್.ಟಿ.ಸೋಮಶೇಖರ್

ಬೆಂಗಳೂರು,ಮೇ.೬- ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಒಳಗೊಂಡಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಶೇ.೭೫ರಷ್ಟು ಅಭಿವೃದ್ಧಿ ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಮುಕ್ತಾಯವಾಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಅಗರ, ಹೆಚ್.ಗೊಲ್ಲಹಳ್ಳಿ, ಕೆ.ಗೊಲ್ಲಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿಗಾಗಿ ಹಾಳಾದ ರಸ್ತೆಯನ್ನು ೧೫೬೧ ಕೋಟಿ ರೂ. ಅನುದಾನದಲ್ಲಿ ಸರಿಪಡಿಸಲಾಗಿದೆ. ೧೭೫ ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ೪೧೭ ಕೋಟಿ ರೂ. ವೆಚ್ಚದಲ್ಲಿ ೨೨೩ ಗ್ರಾಮಗಳ ಸಂಪರ್ಕ ಕಲ್ಪಿಸಲು ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ೩೨೪ ಕೋಟಿ ರೂ. ಅನುದಾನದಲ್ಲಿ ಗ್ರಾಮೀಣ ಮನೆಗಳಿಗೆ ನಳನೀರು ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಬಿಬಿಎಂಪಿ ಪ್ರದೇಶದ ೬೨೮ ಕಿ.ಮೀ. ಹೆಚ್.ಟಿ.ಲೈನ್ ಅನ್ನು ಭೂಗತ ಕೇಬಲ್ ಆಗಿ ಬದಲಾಯಿಸಲಾಗಿದೆ. ಕಂಬೀಪುರ ಮತ್ತು ದೊಡ್ಡೇರಿಯಲ್ಲಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ, ನೀರು, ವಿದ್ಯುತ್ ಸೌಕರ್ಯ ಕಲ್ಪಿಸುವುದರ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯಲ್ಲಿ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂದು ೧ ಬಿಎಚ್ ಕೆ, ೨ ಬಿಎಚ್ ಕೆಯ ೧೭೮೮೦ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ೫೦ಕ್ಕೂ ಅಧಿಕ ಪಾರ್ಕ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.

ಅಂಗನವಾಡಿ ಕೇಂದ್ರಗಳು, ಶಾಲಾ ಕಟ್ಟಡಗಳ ನಿರ್ಮಾಣ ಮಾಡುವ ಮೂಲಕ ಬಡಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲಾಗಿದೆ.
ಸ್ತ್ರೀ ಶಕ್ತಿ ಸಂಘಗಳ ನೋಂದಣಿಗೆ ಅಲೆದಾಡುವುದನ್ನು ತಪ್ಪಿಸಲು ಶಾಸಕರ ಕಚೇರಿಯು ವತಿಯಿಂದ ಉಚಿತವಾಗಿ ನೋಂದಣಿ ಮಾಡಿಸಿ ಸಾಲಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತಿಗಳು, ಹಾಲು ಉತ್ಪಾದಕರ ಸಹಕಾರ ಸಂಘ, ಕೃಷಿ ಪತ್ತಿನ ಸಹಕಾರ ಸಂಘಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಪ್ರಚಾರದ ವೇಳೆ ಹಲವಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್‌ರವರು ಅಗರ, ಎಚ್.ಗೊಲ್ಲಹಳ್ಳಿ, ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು.