
ಸಂಜೆವಾಣಿ ವಾರ್ತೆ
ಕುರುಗೋಡು:ಏ.23 ಕಳೆದ ಹದಿನೈದು ವರ್ಷದಲ್ಲಿ ಸಂಡೂರು ಕ್ಷೇತ್ರಾದ್ಯಂತ ಸಾಕಷ್ಟು ಅಭಿವೃದ್ಧಿ ಜತೆಗೆ ಮೂಲಸೌಕರ್ಯ ಒದಗಿಸಿದ್ದು, ಜನರ ಪರವಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಈ ಬಾರಿಯ ಚುನಾವಣೆಯಲ್ಲಿ ನಾವು ಗೆಲ್ಲಲು ಶ್ರೀರಕ್ಷೆಯಾಗಲಿದೆ ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಈ.ತುಕಾರಾಂ ಹೇಳಿದರು.
ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಸುಮಾರು 120 ಕೋಟಿ ವೆಚ್ಚದಲ್ಲಿ 10 ಎಕರೆ ಭೂಮಿಯಲ್ಲಿ 300 ಬೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲಾಗುತ್ತಿದೆ. ನುಡಿದಂತೆ ನಡೆಯುವ ಜತೆಗೆ ನುಡಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗಿದೆ. ಕ್ಷೇತ್ರದಲ್ಲಿ ಜನರು ಈ ಬಾರಿ ಮತ್ತೇ ಕಾಂಗ್ರೆಸ್ ಬಾವುಟ ಹಾರಿಸಲು ನಿರ್ಧರಿಸಿದ್ದಾರೆ. ಪ್ರಜ್ಞಾವಂತ ಜನರಿದ್ದು, ಬಿಜೆಪಿಗೆ ಮಣ್ಣು ಮುಕ್ಕಿಸಲಿದ್ದಾರೆ. ಮೂರು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿವೆ. ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುವ ಖಚಿತ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ. ಬಿಜೆಪಿಯವರು ಮೋದಿ, ಅಮಿತ್ ಶಾ ಸೇರಿದಂತೆ ಯಾರನ್ನು ಬೇಕಾದರೂ ಕರೆಸಿ ಪ್ರಚಾರ ಮಾಡಿದರೂ, ಬಿಜೆಪಿಯನ್ನು ಸೋಲಿಸಲು ರಾಜ್ಯದ ಜನರು ಶಪಥ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ನಲ್ಲಿ ಜನಪರವಾದ ಯೋಜನೆಗಳಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಯೋಜನೆಗಳು ಜಾರಿಗೆ ಬರಲಿವೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿಯವರು ಜನತೆಗೆ ಮಂಕುಬೂದಿ ಹಚ್ಚಲು ಹೊರಟಿದ್ದು, ಈಗಾಗಲೇ ಜನರು ಎಚ್ಚರಗೊಂಡಿದ್ದು, ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಏ.26ಕ್ಕೆ ಸಂಡೂರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಪ್ರಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಯುವಕರು ಹಾಗೂ ಮುಖಂಡರು ಏಳುಬೆಂಚಿ ಗ್ರಾಮದಲ್ಲಿ ಬೈಕ್ ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಎಂ.ಎಲ್.ಸಿ.ಕೆಎಸ್.ಎಲ್ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯು. ಪಂಪಪಾತಿ, ಪ್ರಚಾರ ಸಮಿತಿ ಅಧ್ಯಕ್ಷ ಕೆ. ಗುರುಪಾದಪ್ಪ, ಹವಳಿ ಜಿಲ್ಲೆಯ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ್ ಗೌಡ, ಪ.ಪಂ ಅಧ್ಯಕ್ಷ ಮಂಜುನಾಥ, ಪ.ಪಂ ಮಾಜಿ ಅಧ್ಯಕ್ಷ ರಾಜಶೇಖರ್,ಛಲವಾದಿ ಹನುಮಂತಪ್ಪ, ತಮ್ಮನಗೌಡ ಸೇರಿದಂತೆ ಇತರರು ಇದ್ದರು.