ಅಭಿವೃದ್ಧಿ ಕಾಮಗಾರಿಳೇ ಸ್ಥಗಿತಗೊಂಡಿವೆ: ಶಾಸಕ ಮಂಜು ವಾಗ್ದಾಳಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.13: ಆಡಳಿತಾರೂಡ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೊಸ ಅಭಿವೃದ್ದಿ ಮಾಡುವುದಿರಲಿ ಪ್ರಗತಿಯಲ್ಲಿರುವ ಅಭಿವೃದ್ದಿ ಕಾಮಗಾರಿಗಳೇ ಸ್ಥಗಿತಗೊಂಡಿವೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಜನರ ಬದುಕಿಗೆ ಕೊಳ್ಳಿಯಿಡುವ ಕೆಲಸ ಮಾಡುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ವಾಗ್ದಾಳಿ ನಡೆಸಿದರು.
ತಾಲೂಕಿನ ಶಿಳನೆರೆ ಮತ್ತು ಬೂಕನಕೆರೆ ಹೋಬಳಿಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಬಿರುಸಿನ ಮತಯಾಚನೆ ನಡೆಸಿದ ಶಾಸಕರು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ಸುಭದ್ರವಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ನಮಗೆ ಆನೆ ಬಲ ಬಂದಿದೆ. ನಮ್ಮ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಗೆಲುವು ನಿಶ್ಚಿತವಾಗಿದ್ದು ಸೋಲಿನ ಭೀತಿಗೆ ಒಳಗಾಗಿರುವ ಕಾಂಗ್ರೆಸ್ಸಿಗರು ಹೆಚ್.ಡಿ.ಕೆ ಬಗ್ಗೆ ಲಘು ಮಾತುಗಳನ್ನು ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಕುಮಾರಣ್ಣನ ಕೊಡುಗೆ ಏನು? ಎಂದು ಪ್ರಶ್ನಿಸುತ್ತಿರುವ ಕಾಂಗ್ರೆಸ್ಸಿಗರು ಜಿಲ್ಲೆಯ ಅಭಿವೃದ್ದಿಗೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಕೊಡುಗೆ ಏನು? ಎನ್ನುವುದನ್ನು ಜನರ ಮುಂದಿಡಬೇಕೆಂದು ಒತ್ತಾಯಿಸಿದ ಶಾಸಕ ಹೆಚ್.ಟಿ.ಮಂಜು ಬರಡಾಗಿದ್ದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಮಂಡ್ಯ ತಾಲೂಕಿನ ದುದ್ದ ಮತ್ತು ಬಸರಾಳು ಹೋಬಳಿಗಳಿಗೆ ಹೇಮಾವತಿ ನೀರು ಹರಿಸಿದವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು. ಇಳಿವಯಸ್ಸಿನಲ್ಲಿಯೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಧ್ವನಿಯೆತ್ತುತ್ತಿರುವ ಹೆಚ್.ಡಿ.ದೇವೇಗೌಡರು ಈ ಹಿಂದೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಾಗ ಜಿಲ್ಲೆಯ ಹಳ್ಳಿ ಹಳ್ಳಿಯಲ್ಲಿಯೂ ರಸ್ತೆ, ಸೇತುವೆಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿ ಸಂಪರ್ಕ ಕ್ರಾಂತಿ ಮಾಡಿದರು. ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಕೊಟ್ಟವರು ನಮ್ಮ ಕುಮಾರಣ್ಣ, ಕೆ.ಆರ್.ಪೇಟೆಗೆ ಎಂಜಿನಿಯರಿಂಗ್ ಕಾಲೇಜು, ಮಿನಿ ವಿಧಾನಸೌಧ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಗ್ರಾಮಿಣ ಪ್ರದೇಶಕ್ಕೆ ಹತ್ತಾರು ಸರ್ಕಾರಿ ಪಿ.ಯು ಕಾಲೇಜುಗಳು, ಬಂಡಿಹೊಳೆ ಸೇತುವೆ, ಕಟ್ಟೆಕ್ಯಾತನಹಳ್ಳಿ ಸೇತುವೆ, ತಾಲೂಕಿನಲ್ಲಿ ಹತ್ತಾರು ಸರ್ಕಾರಿ ಆಸ್ಪತ್ರೆಗಳು, ವಿದ್ಯುತ್ ವಿತರಣಾ ಕೇಂದ್ರಗಳು, ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ, ಅಕ್ಕಿಹೆಬ್ಬಾಳು, ಬೂಕನಕೆರೆ ಹೋಬಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆ.ಆರ್.ಪೇಟೆ ಪಟ್ಟಣಕ್ಕೆ ಎರಡನೇ ಹಂತದ ಕುಡಿಯುವ ನೀರು ಪೂರೈಕೆ ಘಟಕ, ಹಲವಾರು ವಿದ್ಯಾರ್ಥಿ ವಸತಿ ನಿಲಯಗಳು ಸೇರಿದಂತೆ ಜೆಡಿಎಸ್ ಆಡಳಿತದಲ್ಲಿ ಅಭಿವೃದ್ದಿ ಪರ್ವವೇ ನಡೆದಿದೆ. ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನುಡಿದಂತೆ ನಡೆದು ರಾಜ್ಯದ ರೈತರ 25 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಿದವರು ನಮ್ಮ ಕುಮಾರಣ್ಣ. ಮಂಡ್ಯಕ್ಕೆ ಕುಮಾರಣ್ಣ ಯಾರು ಎನ್ನುವವರು ಮೊದಲು ಕುಮಾರಣ್ಣನ ಕೊಡುಗೆಗಳನ್ನು ನೋಡಬೇಕು ಮತ್ತು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಕೊಡುಗಗಳೇನು? ಎನ್ನುವುದನ್ನು ಬಹಿರಂಗವಾಗಿ ಹೇಳುವಂತೆ ಆಗ್ರಹಿಸಿದರು.
ನೀರು ಹರಿಸಲು ಆಗ್ರಹ:- ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕೆರೆ ಕಟ್ಟೆಗಳು ಬರಿದಾಗಿದ್ದು ಪ್ರಾಣಿ ಪಕ್ಷಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ. ಕೊಳವೆ ಬಾವಿಗಳು ಸ್ಥಗಿತಗೊಳ್ಳುತ್ತಿದ್ದು ಅಳಿದುಳಿದ ಬೆಳೆ ಸಂರಕ್ಷಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ. ಇಂತಹ ಕಠಿಣ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ಒಂದಷ್ಟು ನೀರು ಹರಿಸಿ ರೈತರ ಹಿತಾಸಕ್ತಿ ಕಾಪಾಡಲು ವಿಫಲವಾಗಿದೆ. ನೆರೆಯ ತುಮಕೂರು ಜಿಲ್ಲೆಗೆ ಹೇಮೆಯ ನೀರು ಹರಿಸಿದ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ನೀರು ಹರಿಸದೆ ತಾರತಮ್ಯ ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿ ಅತೀಹೆಚ್ಚು ಕೊಬ್ಬರಿ ಬೆಳೆಗಾರರಿದ್ದರೂ ಕೊಬ್ಬರಿ ಖರೀದಿ ಪ್ರಮಾಣವನ್ನು ಕಡಿತಗೊಳಿಸಿ ಜಿಲ್ಲೆಯ ರೈತರನ್ನು ವಂಚಿಸಿದೆ. ಕುಮಾರಣ್ಣ ಬಗ್ಗೆ ಗಟ್ಟಿಯಾಗಿ ಟೀಕಿಸುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ತಮ್ಮದೇ ರಾಜ್ಯ ಸರ್ಕಾರ ಜಿಲ್ಲೆಯ ರೈತರಿಗೆ ಮೋಸ ಮಾಡುತ್ತಿದ್ದರೂ ಅದನ್ನು ಪ್ರಶ್ನಿಸುವ ಎದೆಗಾರಿಕೆ ಇಲ್ಲದಂತಾಗಿದೆ. ಜಿಲ್ಲೆಯ ಇತರ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದರೂ ಅವರಿಗೆ ಸಿದ್ದರಾಮಯ್ಯ ಅವರ ತಾರತಮ್ಯ ನೀತಿಯನ್ನು ಪ್ರಶ್ನಿಸುವ ತಾಕತ್ತಿಲ್ಲ ಎಂದು ಟೀಕಿಸಿದ ಶಾಸಕ ಹೆಚ್.ಟಿ.ಮಂಜು ತಾಲೂಕಿನ ರೈತರ ಹಿತದೃಷ್ಠಿಯಿಂದ ತಕ್ಷಣವೇ ಹೇಮಾವತಿ ಜಲಾಶಯದಿಂದ ಅಲ್ಪ ಪ್ರಮಾಣದ ನೀರು ಹರಿಸಿ ರೈತರ ಬೆಳೆದು ನಿಂತಿರುವ ಬೆಳೆ ಸಂರಕ್ಷಣೆಗೆ ಮುಂದಾಗಬೇಕು. ನೀರು ಹರಿಸುವಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯ ಜನ ತಿರಸ್ಕರಿಸಬೇಕು ಹಾಗೂ ರಾಜ್ಯದ ಸಮಸ್ತ ನೀರಾವರಿ ಯೋಜನೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲೆಯ ಜನ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅತೀ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರ ಸುಮಾರು 02 ಲಕ್ಷ ಕೋಟಿ ಸಾಲ ಮಾಡಿದೆ ಅಭಿವೃದ್ಧಿ ಮಾಡಲು ಸರ್ಕಾರದಲ್ಲಿ ಹಣವಿಲ್ಲ ಮೀಸಲಿದ್ದ ಹಣವನ್ನೆಲ್ಲಾ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ.ನರೇಗಾ,ಜೆಜೆಎಂ,ಹದಿನೈದನೇ ಹಣಕಾಸು ಯೋಜನೆ ಇವುಗಳ ಕೇಂದ್ರ ಸರ್ಕಾರದ ಯೋಜನೆಗಳು ಇವುಗಳನ್ನು ನಮ್ಮ ಯೋಜನೆಗಳು ಎಂದು ಕಾಂಗ್ರೆಸ್ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಮಂಜು ಕಿಡಿಕಾರಿದರು.
ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶೀಳನೆರೆ ಮೋಹನ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಶೀಳನೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯಿತ್ರಿ, ಬಿಜೆಪಿ ಉಸ್ತುವಾರಿ ಸಿದ್ದರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಟಿ.ಬಲದೇವ್, ಮುಖಂಡರುಗಳಾದ ಸ್ವಾಮೀಗೌಡ, ಟಿ.ಲೋಕೇಶ್, ಅಗ್ರಹಾರಬಾಚಹಳ್ಳಿ ನಾಗೇಶ್, ಬೈರಾಪುರ ಹರೀಶ್, ಶೀಳನೆರೆ ಸಿದ್ದೇಶ್, ಮರಡಹಳ್ಳಿ ಪ್ರದೀಪ್, ಶೀಳನೆರೆ ಭರತ್, ಜಯದೇವ, ಚಟ್ಟೇನಹಳ್ಳಿ ನಾಗರಜು, ಬ್ಯಾಲದಕೆರೆ ನಂಜಪ್ಪ, ನವೀನ್, ತಾಲೂಕು ವೀರಶೈವ ಸಮಾಜದ ಮುಖಂಡ ತೋಟಪ್ಪ ಶೆಟ್ಟಿ ಸೇರಿದಂತೆ ಆಯಾ ಭಾಗದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪ್ರಚಾರ ಸಭೆಗಳಲ್ಲಿದ್ದರು.