ಅಭಿವೃದ್ಧಿ ಕಾಮಗಾರಿಗೆ ಚಾಲನೆ

ತುಮಕೂರು, ನ. ೨೦- ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವ ಮಾಧುಸ್ವಾಮಿ, ಸರ್ಕಾರಿ ಜೂನಿಯರ್ ಕಾಲೇಜು ಮೈದಾನವನ್ನು ಬೇರೆ ಉದ್ದೇಶಗಳಿಗೆ ಕೊಡದೆ ಶಾಲಾ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳುವ ಒತ್ತಾಸೆ ಕೇಳಿ ಬಂದಿದೆ. ಕಾಂಪೌಂಡ್ ಸುತ್ತ ಸಾರ್ವಜನಿಕರು ಕುಳಿತುಕೊಳ್ಳಲು ಸಿಮೆಂಟ್ ಕುರ್ಚಿಗಳನ್ನು ಮಾಡಿ ೮೦೦ ಅಡಿ ವಿಸ್ತೀರ್ಣದಲ್ಲಿ ಜಾಗ ಮಾಡಿಕೊಡಲಾಗುವುದು. ಸೂರ್ಯನ ಬೆಳೆಕು ಬೀಳುವಂತೆ ವ್ಯವಸ್ಥೆ ಸಹ ಮಾಡಲಾಗುವುದು ಎಂದರು.
ಯಾವುದೇ ಕಾರಣಕ್ಕೆ ಜೂನಿಯರ್ ಕಾಲೇಜು ಮೈದಾನ ಬೇರೆ ಉದ್ದೇಶಗಳಿಗೆ ಬಳಕೆಯಾಗಬಾರದು. ಅದಕ್ಕೆ ಆಸ್ಪದ ನೀಡದ ರೀತಿಯಲ್ಲಿ ಮೈದಾನದ ಮುಂಭಾಗದಲ್ಲಿ ಗ್ರಿಲ್ ಮಾಡಿ ಯಾರೂ ಸಹ ಸುಲಭವಾಗಿ ಒಳಗೆ ಬಂದು ಹೋಗದಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಎಲ್ಲರೂ ಗೇಟ್ ಮುಖಾಂತರವೇ ಒಳಗೆ ಬರುವಂತೆ ಸುಸಜ್ಜಿತವಾಗ ದ್ವಾರ ಬಾಗಿಲು ಸಹ ನಿರ್ಮಾಣವಾಗಲಿದೆ ಎಂದರು.
ಈ ಮೈದಾನ ಶಾಲಾ ಚಟುವಟಿಕೆ ಜತೆಗೆ ಖಾಸಗಿ, ರಾಜಕೀಯ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು.
ಶಾಸಕ ಜ್ಯೋತಿಗಣೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಜೂನಿಯರ್ ಕಾಲೇಜು ಮೈದಾನದಲ್ಲಿ ಸುಮಾರು ೬.೫೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ. ಈ ಮೈದಾನವನ್ನು ೬ ದಶಕಗಳಿಂದ ಕ್ರೀಡಾ ಚಟುವಟಿಕೆಗೆ ಅನುವು ಮಾಡಿಕೊಡಲಾಗಿದ್ದು, ಇದರಿಂದ ಕ್ರೀಡಾಪಟುಗಳಿಗೆ ತುಂಬಾ ಅನುಕೂಲವಾಗಿದೆ ಎಂದರು.
ಜೂನಿಯರ್ ಕಾಲೇಜು ಮೈದಾನದಲ್ಲಿ ೫೦ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೊಸ ಕಟ್ಟಡಗಳು, ಸ್ಮಾರ್ಟ್ ಕ್ಲಾಸ್ ರೂಂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಿತ್ತು. ಆದರೆ ಈ ಜಾಗಕ್ಕೆ ಮಹಾತ್ಮ ಗಾಂಧೀಜಿಯವರು ಬಂದು ಹೋಗಿರುವ ಇತಿಹಾಸವಿದೆ. ಹಾಗಾಗಿ ಸಾರ್ವಜನಿಕರು ಈ ಕಾಮಗಾರಿಗಳಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಕೈ ಬಿಡಬೇಕಾಯಿತು ಎಂದರು.
ಸದ್ಯಕ್ಕೆ ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್, ಖೋಖೋ, ಕಬಡ್ಡಿ ಸೇರಿದಂತೆ ಇತರ ಕ್ರೀಡಾ ಚಟುವಟಿಕೆಗಳಗೆ ಅನುವಾಗುವಂತಹ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಮುಂಬರುವ ದಿನಗಳಲ್ಲಿ ಕಾಲೇಜು ಮತ್ತು ಮೈದಾನ ಪ್ರತ್ಯೇಕವಾಗಬೇಕು. ಮೈದಾನ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಬಿ.ಸಿ. ನಾಗೇಶ್, ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.