ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಚನ್ನಮ್ಮನ ಕಿತ್ತೂರ, ಮಾ 11: ಐತಿಹಾಸಿಕ ಕಿತ್ತೂರ ನಾಡಿಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ಸತತ ಪ್ರಯತ್ನದಿಂದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಹಳೆಯ ತಹಶೀಲ್ದಾರ ಕಛೇರಿ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶಾಸಕರ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಪಟ್ಟಣದ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿಗಳಿಗೆ ಅನುದಾನ ನೀಡಲಾಗಿದೆ. ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡು ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ಡೆಸ್ಕ್ ಸೇರಿ ಮೂಲಸೌಲಭ್ಯ ಒಳಗೊಡಂತೆ 5 ಸರ್ಕಾರಿ ಶಾಲೆಗಳನ್ನು ನಿರ್ಮಿಸಿಕೊಡಲಾಗುವುದು. ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ವ್ಯವಸ್ಥೆ ಮಾಡಲಾಗುವುದು. ಹಾಳಾಗಿರುವ ರಸ್ತೆ ಸರಿಪಡಿಸಲಾಗುವುದು ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಪಡೆದಿದ್ದೇನೆ. ಸಚಿವರು ಹೆಚ್ಚಿನ ಅನುದಾನ ನೀಡಿದ್ದಾರೆ. ಕಿತ್ತೂರ ಕೋಟೆ ಅಭಿವೃದ್ದಿಗೆ ಆದಷ್ಟು ಬೇಗನೇ ಚಾಲನೆ ನೀಡಲಾಗುವುದು. ಪಟ್ಟಣದ ಅಭಿವೃದ್ಧಿಗೆ ಸದಾ ಬದ್ದನಿದ್ದೇನೆ ಎಂದರು.
ಧಾರವಾಡ ಗ್ರಾಮೀಣ ಶಾಸಕ ಹಾಗೂ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ವಿನಯ ಕುಲಕರ್ಣಿ ಮಾತನಾಡಿ ನಮ್ಮ ಇಲಾಖೆಯಿಂದ ಕಿತ್ತೂರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಆರ್ಶೀವಚನ ನೀಡಿ, ಕಿತ್ತೂರು ಮತ್ತೇ ತನ್ನ ಗತವೈಭವಕ್ಕೆ ಮರಳುತ್ತಿದೆ. ಸಚಿವರು, ಶಾಸಕರು ಕ್ರೀಯಾಶೀಲರಾಗಿದ್ದಾರೆ ಎಂದರು.
ಕಿತ್ತೂರ-ನೇಸರಗಿ ಬ್ಲಾಕ್ ಅಧ್ಯಕ್ಷರುಗಳಾದ ಸಂಗನಗೌಡ ಪಾಟೀಲ, ನಿಂಗಪ್ಪ ಹರಕೇರಿ, ಮಾಜಿ ಜಿಪಂ ಸದಸ್ಯ ಶಂಕರ ಹೊಳಿ, ಅನಿಲ್ ಎಮ್ಮಿ, ಚಂದ್ರಗೌಡ ಪಾಟೀಲ, ಸಾಗರ ದೇಸಾಯಿ, ಸುನೀಲ ಘೀವಾರಿ, ಅಶ್ಪಾಕ್ ಹವಾಲ್ದಾರ, ಶಂಕರ ಬಡಿಗೇರ, ಮುದಕಪ್ಪ ಮರಡಿ, ಪಪಂ ಸರ್ವಸದಸ್ಯರು, ಮುಖಂಡರು, ಕಂದಾಯ ಇಲಾಖೆ, ಪೋಲಿಸ ಇಲಾಖೆ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರಿದ್ದರು.