ಅಭಿವೃದ್ಧಿ ಎನ್ನುವುದು ಕಮಿಷನ್ ಗಾಗಿ   ನಡೆಯುವ ದಂಧೆ ಎನ್ನುವಂತಾಗಿದೆ

ದಾವಣಗೆರೆ.ಜು.೨೭: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷವಾಗಿ ಬ್ರಿಟಿಷ್ ಪ್ರಭುತ್ವ  ಹೋಗಿದೆ ಅಷ್ಟೆಯೇ ಹೊರತು ಪೊಲೀಸ್ ಪ್ರಭುತ್ವ ಬಂದಿದೆ ಎಂದು ಹೇಳಲು ಬೇಸರವಾಗುತ್ತದೆ ಎಂದು ಭ್ರಷ್ಟಾಚಾರ ವಿರೋಧಿ, ಮೀಸಲಾತಿ ವಿರೋಧಿ, ಜನಹಿತ  ಪಕ್ಷದ ಸಂಸ್ಥಾಪಕ ಡಾ. ಶ್ರೀಧರ್ ಉಡುಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ  ದೇಶದ ಅಮೃತ ಮಹೋತ್ಸವವನ್ನು  ಆಚರಿಸುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ  ಜನರು ಈ ವರ್ಷವನ್ನು ಕರಾಳ ವರ್ಷವನ್ನಾಗಿ ಆಚರಿಸುವುದು ಒಳ್ಳೆಯದು ಎಂದು ಹೇಳಿದರು.ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ,ಪತ್ರಿಕಾ ಸ್ವಾತಂತ್ರ್ಯ,ದ ಅವನತಿ, ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಹೀಗೆ ನೂರಾರು  ಸಮಸ್ಯೆಗಳು ದೇಶದ ತುಂಬೆಲ್ಲಾ ಹರಡಿದ್ದು, ಇಂತಹ ವೇಳೆಯಲ್ಲಿ ಅಮೃತ ಮಹೋತ್ಸವ ಆಚರಣೆಗಿಂತ ಕರಾಳ ದಿನಾಚರಣೆ ಮಾಡುವುದೇ ಸರಿ ಎಂದರು.ತಲೆಗೆ ಹೆಲ್ಮೆಟ್, ಬಾಯಿಗೆ ಮಾಸ್ಕ್, ಪೊಲೀಸ್ ದಂಡ, ಹೊಡೆತಗಳೇ, ತಪ್ಪಿದರೆ ಕೋರ್ಟಿಗೆ ಅಡ್ಡಾಡಿಸುವುದೇ  ರಾಜಕೀಯ ಪಕ್ಷಗಳ ಸಾಧನೆ. ಅಭಿವೃದ್ಧಿ ಎನ್ನುವುದು ಕಮಿಷನ್ ಗಾಗಿ   ನಡೆಯುವ ದಂಧೆಯಾಗಿದ್ದು, ಮುಂದೊಂದು ದಿನ ಶ್ರೀಲಂಕಾದ ಪರಿಸ್ಥಿತಿಯೇ ಭಾರತಕ್ಕೂ ಬರಲಿದೆ ಎಂದು ಎಚ್ಚರಿಸಿದರು.ಅಮೃತಮಹೋತ್ಸವ ನಿಮಿತ್ತ ಪರಿಗಣಿಸಬೇಕಾದ ಕರ್ತವ್ಯವೆಂದರೆ  ಉಳಿದ ಸಲಹೆಗಳನ್ನು ಪರಿಗಣಿಸಲು ಅಭಿನವ ಅಂಬೇಡ್ಕರ್ ಯಾರಾದರೂ ಇದ್ದರೆ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದು, ಹೊಸ ಸಲಹೆಗಳನ್ನು ಆಹ್ವಾನಿಸುವುದು, ಕ್ಯಾಬಿನೆಟ್ ದರ್ಜೆಯ ಸಚಿವರಿಗೂ ಅಧಿಕಾರ ಹಂಚಬೇಕು, ಜಿಎಸ್ ಟಿ ತೆಗೆಯಬೇಕು, ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ  ಕಾನೂನು ತಿದ್ದುಪಡಿಯಾಗಬೇಕು. ಶೀಘ್ರ ನ್ಯಾಯದಾನ ನೀಡುವ ನಿಟ್ಟಿನಲ್ಲಿ ತಿದ್ದುಪಡಿ ತರಬೇಕು, ನಿರುದ್ಯೋಗ ಭತ್ಯೆ ಮೂಲಭೂತ ಹಕ್ಕಾಗ ಬೇಕು. ಸರ್ಕಾರಿ ಖರ್ಚಿನಲ್ಲಿ ಮಂತ್ರಿಗಳ ವಿದೇಶಿ ಪ್ರಯಾಣ ನಿಲ್ಲಬೇಕು ಇತ್ಯಾದಿ ಬೇಡಿಕೆಗಳನ್ನು ಶ್ರಿಧರ ಉಡುಪ ಸರ್ಕಾರದ ಮುಂದೆ ಇಟ್ಟರು.ಸುದ್ದಿಗೋಷ್ಠಿಯಲ್ಲಿ ವಿದ್ಯಾಧರ್ ಉಡುಪ, ಜಯಧರ್ ಉಡುಪ, ಉದಯ್ ಉಡುಪ ಉಪಸ್ಥಿತರಿದ್ದರು.