ಅಭಿವೃದ್ಧಿ ಅಜೆಂಡಾ, ಸಂಘಟನೆಯ ಶಕ್ತಿ ಗೆಲುವಿನ ಅಂತರ ಹೆಚ್ಚಳ: ಎಸ್.ಟಿ.ಸೋಮಶೇಖರ್

ಬೆಂಗಳೂರು,ಮೇ.೮- ಸಂಘಟನೆಯ ಶಕ್ತಿ, ಅಭಿವೃದ್ಧಿ ಅಜೆಂಡಾ ಗೆಲುವಿಗೆ ಪೂರಕವಾಗಲಿದೆ. ಜನಪರ ಯೋಜನೆಗಳಿಗೆ ಮತದಾರರು ಬೆಂಬಲ ನೀಡುತ್ತಿದ್ದಾರೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಹೆಮ್ಮಿಗೆಪುರ ವಾರ್ಡ್ ನ ರಘುವನಹಳ್ಳಿ, ತಲಘಟ್ಟಪುರ, ವಾಜರಹಳ್ಳಿ, ಗಾಣಿಗರಪಾಳ್ಯ, ಚಿಕ್ಕೇಗೌಡನಪಾಳ್ಯ, ಶ್ರೀನಿವಾಸಪುರ ಕಾಲೋನಿ ಹಾಗೂ ಕೆಂಗೇರಿ ವಾರ್ಡ್ ನಲ್ಲಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕ್ಷೇತ್ರ ಮತ್ತು ರಾಜ್ಯದಲ್ಲಿ ದೂರದೃಷ್ಟಿಯ ಅಭಿವೃದ್ಧಿ ಕೆಲಸಗಳು ಹಾಗೂ ಜನರ ಕಷ್ಟಕ್ಕೆ ಸ್ಪಂದಿಸಿದ ಕೆಲಸಗಳು ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಲಿದೆ. ನಮ್ಮಲ್ಲಿ ಸಂಘಟನಾತ್ಮಕವಾಗಿ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದು ಹೇಳಿದರು.

ದೇಶದಲ್ಲಿ ನರೇಂದ್ರ ಮೋದಿ ಅವರ ಕೆಲಸಗಳು, ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ಅವರ ಕೆಲಸಗಳು ಜನ ಮನ್ನಣೆ ಪಡೆದುಕೊಂಡಿವೆ. ದೇಶದ ಆರ್ಥಿಕ ಸುಭ್ರದ್ರತೆ, ರಕ್ಷಣೆ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಕೈಗೊಂಡ ನಿರ್ಧಾರಗಳು ಬಿಜೆಪಿ ಗೆಲುವಿನ ಅಂತರವನ್ನು ಹೆಚ್ಚಿಸಲಿದೆ. ಜನರ ಒಲವು ಬಿಜೆಪಿಯತ್ತ ತಿರುಗಿದೆ ಎಂಬುದಕ್ಕೆ ಎರಡು ದಿನಗಳ ರೋಡ್ ಶೋನಲ್ಲಿ ಸೇರಿದ್ದ ಜನಸ್ತೋಮವೇ ಸಾಕ್ಷಿ ಎಂದರು.

ನಮ್ಮ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್, ಜೆಡಿಎಸ್ ಸರ್ಕಾರ ರಚನೆ ಅಸಾಧ್ಯ. ಕೋವಿಡ್ ಸಂಕಷ್ಟದ ಸಮಯದಲ್ಲಿ ಮನೆ ಸೇರಿಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಈಗ ಜನರ ಬಳಿಗೆ ಬಂದು ಕಣ್ಣೀರಾಕುತ್ತಿದ್ದಾರೆ. ಜನರು ಕಣ್ಣೀರಾಕುವಾಗ ಅವರ ಸಾಂತ್ವನ ನೀಡಲಿಲ್ಲ, ಒಬ್ಬರಿಗೆ ಒಂದು ಮಾಸ್ಕ್, ಫುಡ್ ಕಿಟ್ ಕೊಡಲಿಲ್ಲ. ಇಂತಹವರಿಂದ ಜನಸೇವೆ ಸಾಧ್ಯವೇ ಎಂದು ಪ್ರಶ್ನಿಸಿದರು.

ಯಶವಂತಪುರ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಆಗಮಿಸಿ ಮತಪ್ರಚಾರ ನಡೆಸಿದರು. ದರ್ಶನ್, ತಾರಾ ಅನುರಾಧ, ನೆ.ಲ.ನರೇಂದ್ರ ಬಾಬು ಸೇರಿದಂತೆ ಹಲವರು ನಮ್ಮ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್‌ರವರು ಹೆಮ್ಮಿಗೆಪುರ ವಾರ್ಡ್, ರಘುವನಹಳ್ಳಿ ಸೇರಿದಂತೆ ವಿವಿಧ ಕಡೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.