ಅಭಿವೃದ್ಧಿಯಲ್ಲಿ ಅಂಕಿ-ಅಂಶಗಳ ಪಾತ್ರ ಪ್ರಮುಖ

ಕಲಬುರಗಿ:ಜೂ.29: ರಾಷ್ಟ್ರದ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಅವುಗಳಿಗೆ ಪರಿಹಾರವನ್ನು ದೊರಕಿಸಿಕೊಡುವಲ್ಲಿ ಅಂಕಿ-ಅಂಶಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ಪ್ರಸಿದ್ದ ಸಂಖ್ಯಾಶಾಸ್ತ್ರಜ್ಞ ಪ್ರೊ.ಪಿ.ಸಿ.ಮಹಲ್‍ನೋಬಿಸ್‍ರ ಜನ್ಮದಿನವಾದ ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ’ಯನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.
ಪ್ರೊ.ಮಹಲ್‍ನೊಬಿಸ್ ಅವರು ಸಂಖ್ಯಾಶಾಸ್ತ್ರ ಕ್ಷೇತ್ರಕ್ಕೆ ತಮ್ಮದೇ ಆದ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ. ಗಣಿತಶಾಸ್ತ್ರ, ವಿಜ್ಞಾನಕ್ಷೇತ್ರಕ್ಕೂ ಸಾಕಷ್ಟು ಸೇವೆಯನ್ನು ನೀಡಿದ್ದಾರೆ. ದ್ವಿತೀಯ ಪಂಚವಾರ್ಷಿಕ ಯೋಜನೆಗೆ ಸೂಕ್ತ ಮಾರ್ಗದರ್ಶನ ನೀಡಿ ಯಶಸ್ವಿಗೊಳಿಸಿದ್ದಾರೆ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರ ಸಂಬಂಧಿಸಿದಂತೆ ಅನೇಕ ಅಂಕಿ-ಅಂಶಗಳನ್ನು ಸಂಗ್ರಹಿಸಿ ಆರ್ಥಿಕ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದ್ದಾರೆ. ಸಂಖ್ಯಾಶಾಸ್ತ್ರವು ರಾಷ್ಟ್ರದ ಸಂಪನ್ಮೂಲಗಳ ಸದ್ಬಳಕೆಯ ಬಗ್ಗೆ ವಿವರಣೆ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸತೀಸ್ ಟಿ.ಸಣಮನಿ, ಅಕಾಡೆಮಿ ನಿರ್ದೇಶಕ ದತ್ತು ಹಡಪದ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಪ್ರಮುಖರಾದ ಕೆ.ಎನ್.ಪಾಟೀಲ, ವಿನೋದ ಜಮಾದಾರ, ನಿತೀನ್ ರಂಗದಾಳ, ಇಸ್ಮೈಲ್ ಅತ್ತರ್ ಸೇರಿದಂತೆ ಇನ್ನಿತರರು ಇದ್ದರು.