ಅಭಿವೃದ್ಧಿಪರ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ: ಮೇ.16:- ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಭ್ರμÁ್ಟಚಾರಕ್ಕೆ ಕಡಿವಾಣ ಹಾಕಲಾಗುವುದು. ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ. ಸಾರ್ವಜನಿಕರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ರೈತನಾಯಕ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಜನರ ಮಧ್ಯೆ ನಿಂತು ಕೆಲಸ ಮಾಡುವೆ. ನನಗೆ ರಾಜಕೀಯ ಅನುಭವ ಇಲ್ಲ. ಆದರೆ ಕಲಿಯುವ ಆಸಕ್ತಿ ಇದೆ. ಹಂತಹಂತವಾಗಿ ಅನುಭವ ಪಡೆದುಕೊಳ್ಳುವೆ. ಜನರು, ರೈತರ ಬಗ್ಗೆ ಕಾಳಜಿ ಇದೆ. ಗದ್ದೆಯಲ್ಲಿ ಕೆಲಸ ಮಾಡದಿದ್ದರೂ ರೈತರ ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ ಎಂದರು.
ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಸೇರಿದಂತೆ ಎಲ್ಲರ ಸಲಹೆ ಪಡೆದು ಅಭಿವೃದ್ಧಿ ಕೆಲಸ ಮಾಡುವೆ.ನಮ್ಮ ಯುವಕರು ಕಾರ್ಯಶೀಲರಾಗುವಂತೆ ಮಾಡಲು ಸಹಕಾರಿ ಕ್ಷೇತ್ರಗಳ ಮೂಲಕ ಸಣ್ಣ ಕೈಗಾರಿಕೆ ಸ್ಥಾಪನೆ ಮಾಡಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸಲಾಗುವುದು. ಆ ಮೂಲಕ ಕುಡಿತದ ಚಟ ಬಿಡಿಸಬೇಕಿದೆ. ರೈತರು ಕೃಷಿ ಕೆಳಮಟ್ಟದ ಕೆಲಸ ಎನ್ನದೇ ಅದನ್ನು ಘನತೆ ಹೆಚ್ಚಿಸುವ ಕೆಲಸ ಎಂದು ಪರಿಗಣಿಸಬೇಕು ಎಂದು ತಿಳಿಸಿದರು.
ಶಾಂತಿಯುತವಾಗಿ ಬದುಕಿ: ಕ್ಷೇತ್ರದಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ನೀಡಬಾರದು. ಎಲ್ಲರೂ ಶಾಂತಿಯುತವಾಗಿ ಬದುಕಬೇಕು ಎಂಬುದು ರೈತಸಂಘದ ಉದ್ದೇಶ. ಚುನಾವಣೆ ಬರುತ್ತೆ, ಹೋಗುತ್ತೆ. ಆದರೆ ನಾವೆಲ್ಲರೂ ಪ್ರೀತಿಯಿಂದ ಕೆಲಸ ಮಾಡೋಣ. ಬೇಕೆಂದೆ ಗಲಭೆ ಸೃಷ್ಟಿ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಆಸ್ಪತ್ರೆಗಳಲ್ಲಿ ಸಮಸ್ಯೆ, ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ನಿರ್ವಹಣೆ, ರೈತರಿಗೆ ನೀರಾವರಿ ಸೌಲಭ್ಯ, ಕುಡಿಯುವ ನೀರಿನ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದರು.
ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುವಂತೆ ಮಾಡುವುದು. ಆ ಮೂಲಕ ಒಂದು ಬಾರಿ ಸಾಲ ಮನ್ನಾ ಮಾಡಿದ ನಂತರ ಮತ್ತೆ ರೈತರು ಸಾಲ ಮಾಡದಂತೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಗಮನಹರಿಸಲಾಗುವುದು. ಅಲ್ಲದೇ ರೈತರ ಬೆಳೆಗಳಿಗೆ ಬೆಂಬಲ ಬೆಲೆ ದೊರಕಿಸಿಕೊಡಲು ಹೋರಾಟ ಮಾಡಲಾಗುವುದೆಂದರು.
ಸಿಎಸ್ಪಿ ವಿರುದ್ಧ ಗೆಲುವು ಸವಾಲಾಗಿತ್ತು : ಅನುಭವಿ ಹಾಗೂ ಬಲಿಷ್ಠ ರಾಜಕಾರಣಿ ಸಿ.ಎಸ್.ಪುಟ್ಟರಾಜು ಅವರ ವಿರುದ್ದ ನನ್ನಂತ ಯುವಕ ಗೆಲ್ಲುವುದು ಸವಾಲಾಗಿತ್ತು. ಆದರೆ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಚುನಾವಣೆ ಮಾದರಿಯಲ್ಲಿ ಹಗಲಿರುಳು ದುಡಿದಿದ್ದರಿಂದ ಪುಟ್ಟರಾಜು ವಿರುದ್ಧ ಗೆಲುವು ಸಾಧ್ಯವಾಯಿತು. ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ ಕ್ಷೇತ್ರದ ಜನತೆಯ ನಂಬಿಕೆಯನ್ನು ಉಳಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಗೆಲುವಿಗೆ ದುಡಿದ ಎಲ್ಲಾ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆಂದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಪಾಂಡವಪುರ ತಾಲೂಕು ಅಧ್ಯಕ್ಷ ಪಿ.ನಾಗರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ಶಿವಳ್ಳಿ ಚಂದ್ರು, ಹರವು ಪ್ರಕಾಶ್, ಬಾಲಚಂದ್ರು ಇತರರಿದ್ದರು.