ಅಭಿವೃದ್ಧಿಗೆ ಹಣವಿಲ್ಲದೆ ಕಾಂಗ್ರೆಸ್ ಸರ್ಕಾರಕ್ಕೆ  ದಿವಾಳಿತನ ಕಾಡುತ್ತಿದೆ – ಯಡಿಯೂರಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.17 :-  ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರದಲ್ಲಿ ಆರ್ಥಿಕ ಹೊರೆ ಕಾಣುತ್ತಿದ್ದು ಅಭಿವೃದ್ಧಿಗೆ ಹಣವಿಲ್ಲದೆ ದಿವಾಳಿತನ ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಅವರು ತಾಲೂಕಿನ ಕಾನಹೊಸಹಳ್ಳಿಯಲ್ಲಿ ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರವಾಗಿ ನಿನ್ನೆ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಪ್ರಧಾನಿ ಹೆಸರನ್ನೇ ಹೇಳದ ಕಾಂಗ್ರೆಸ್ಸಿಗರದು ದೈನೇಸಿ ಸ್ಥಿತಿಯಾಗಿದ್ದು ಈಗ  ದೇಶದಲ್ಲಿ ಅಧಿಕಾರ ಹಿಡಿಯುತ್ತೇವೆಂದು ತಿರುಕನ ಕನಸು ಕಾಣುತ್ತಿದೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತವಾಗಿದ್ದು, ಶಾಸಕ ಜಿ.ಜನಾರ್ದನ ರೆಡ್ಡಿ ಬಿಜೆಪಿಗೆ ಬಂದಿರುವುದು ಆನೆ ಬಲ ಸಿಕ್ಕಂತಾಗಿದೆ. ಹೀಗಾಗಿ, ಬಳ್ಳಾರಿಯಲ್ಲಿ ಬಿ.ಶ್ರೀರಾಮುಲು ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ತಿಳಿಸಿದರು. ಈ ಹಿಂದೆ ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಯೋಜನೆಗಳನ್ನು ಸಿದ್ದರಾಮಯ್ಯ ಸರಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಮಾತನಾಡಿ, ರಾಜಕೀಯವಾಗಿ ನನಗೆ ಪುನರ್ಜನ್ಮ ಕೊಡಬೇಕು. ಈ ಬಾರಿ ನಾನು ಸೋತರೆ ರಾಜಕೀಯವಾಗಿ ನಿರ್ನಾಮವಾಗುವೆ. ರಾಮುಲು ಅವರ ರಾಜಕೀಯ ಭವಿಷ್ಯಕ್ಕೆ ಕೂಡ್ಲಿಗಿ ತಾಲೂಕಿನ ಜನತೆ ಹೆಚ್ಚಿನ ಮತ ನೀಡಿ ಕೈ ಹಿಡಿದರು ಎಂದು ನನ್ನ ಮಕ್ಕಳು, ಮೊಮ್ಮಕ್ಕಳು ನೆನೆಸಿಕೊಳ್ಳುತ್ತಾರೆ. ಬಜೆಪಿ ಸರಕಾರದ ಅವಧಿಯಲ್ಲಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬುಸುವ ಯೋಜನೆ ಜಾರಿಯಾಗಿದೆ. ಒಂದು ವರ್ಷ ಕಳೆದರೂ ಕಾಂಗ್ರೆಸ್ ಸರಕಾರ ಅದನ್ನು ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ತಿಳಿಸಿದರು.
ಜನಾರ್ದನರೆಡ್ಡಿ ಪತ್ನಿ  ಲಕ್ಷ್ಮಿ ಅರುಣಾರೆಡ್ಡಿ   ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅಧಿಕಾರವಧಿಯಲ್ಲಿ ಸಚಿವರಾಗಿದ್ದ ಬಿ.ಶ್ರೀರಾಮುಲು, ಜಿ.ಜನಾರ್ದನರೆಡ್ಡಿಯವರು ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಎಂಎಲ್ಸಿ ರವಿಕುಮಾರ್, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಬಣವಿಕಲಲ್ಲು ಕೆ.ನಾಗರಾಜ, ರಾಮದುರ್ಗ ಸೂರ್ಯಪಾಪಣ್ಣ, ಚಂದ್ರಶೇಖರ ಹಲಗೇರಿ, ಎಸ್.ದುರುಗೇಶ್, ಎಸ್.ಪಿ.ಪ್ರಕಾಶ್, ಬಿ.ಭೀಮೇಶ್, ಜರ್ಮಲಿ ಶಶಿಧರ, ಕೋಲಮ್ಮನಹಳ್ಳಿ ಭೀಮಣ್ಣ, ಮೊರಬ ಶಿವಣ್ಣ, ಹುರುಳಿಹಾಳು ರೇವಣ್ಣ, ಜಿಪಂ ಮಾಜಿ ಅಧ್ಯಕ್ಷೆ ದೀನಾ ಮಂಜುನಾಥ, ಮಾಜಿ ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಎಸ್.ಕೆ.ಗೊಲ್ಲರಹಟ್ಟಿ ಸಣ್ಣ ಬಾಲಪ್ಪ, ಕಲ್ಲೇಶ್ ಗೌಡ ಸೇರಿ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಮೌಳಿ, ಕುಲುಮರಹಟ್ಟಿ ವೆಂಕಟೇಶ್, ಹನುಮಜ್ಜರ ನಾಗೇಶ್, ಕೇಣೇರ ಮಂಜುನಾಥ, ರೇಖಾ ಮಲ್ಲಿಕಾರ್ಜುನ, ಶಾರದಾ ಕುಂಬಾರ, ಹುಲಿಕೆರೆ ಗೀತಾ, ನೇತ್ರಾವತಿ ಸೇರಿ ಇತರರಿದ್ದರು. ಇದೇ ಸಂದರ್ಭದಲ್ಲಿ ನಾನಾ ಪಕ್ಷಗಳ ಕಾರ್ಯಕರ್ತರು ಬಿ.ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.