ಕಲಬುರಗಿ, ಅ 27: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಸದ ಡಾ.ಉಮೇಶ್ ಜಾಧವ್ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಕುರಿತು ಟೀಕಿಸುತ್ತಾ ಬಿಜೆಪಿ ಹೈಕಮಾಂಡ್ ಕನಿಕರ ಗಿಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್ ಟೀಕಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಸಂಸದರಾದ ಬಳಿಕ ಜಾಧವ್ ಅವರದ್ದು ಶೂನ್ಯ ಸಾಧನೆಯಾಗಿದ್ದು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆಯವರನ್ನು ಟೀಕಿಸುವ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಿಯಾಂಕ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೆÇಲೀಸ್, ಕಂದಾಯ, ಅಕ್ರಮ ಮರಳು ಸಾಗಣೆ ತಡೆ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 40ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಈ ಕುರಿತು ಸ್ವತಃ ಸಚಿವ ಪ್ರಿಯಾಂಕ್ ಅವರು ಹೇಳಿಕೆ ನೀಡಿದ್ದಾರೆ. ಹೀಗಿರುವಾಗ, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಜಾಧವ್ ಏನು ಮಾಡಿದ್ದಾರೆ ಎಂಬುದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಸಚಿವ ಪ್ರಿಯಾಂಕ್ ಅವರು ಇತ್ತೀಚೆಗೆ ಚಿಂಚೋಳಿ ಪಟ್ಟಣದಲ್ಲಿ ನಡೆಸಿದ ಜನಸ್ಪಂದನ ಸಭೆಯಲ್ಲಿ 1000ಕ್ಕೂ ಹೆಚ್ಚು ಮನವಿ ಪತ್ರಗಳನ್ನು ಜನರಿಂದ ಸ್ವೀಕರಿಸಿ, ಆ ಪೈಕಿ ಬಹುತೇಕ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಸ್ವತಃ ಸಂಸದ ಜಾಧವ್ ಅವರ ಪುತ್ರ ಹಾಗೂ ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಸಾಕ್ಷಿಯಿದ್ದಾರೆ ಎಂದರು.ಇನ್ನೊಂದೆಡೆ, ಸಂಸದ ಜಾಧವ್ ಚಿಂಚೋಳಿಯಲ್ಲಿ ಕೇವಲ ಕಮಿಷನ್ ಗಿಟ್ಟಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ನೋಡಿದರೆ ತಮಗೆ ಮಾತ್ರ ಅಭಿವೃದ್ಧಿಯ ಕಾಳಜಿ ಇದೆ ಎನ್ನುವಂತೆ ಮಾತನಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಮಾಜಿ ಸಚಿವ ರೇವುನಾಯಕ ಬೆಳಮಗಿ ಇದ್ದರು.
ಹಿರಿಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಉಮೇಶ್ ಜಾಧವ್ ಅಭಿವೃದ್ಧಿಯ ಪಾಠ ಮಾಡಬೇಕಾಗಿಲ್ಲ. ಅವರಿಬ್ಬರೂ ಅಭಿವೃದ್ಧಿಯ ಹರಿಕಾರರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ.
-ರೇವುನಾಯಕ ಬೆಳಮಗಿ
ಮಾಜಿ ಸಚಿವ