ಅಭಿವೃದ್ಧಿಗೆ ಶ್ರಮಿಸದ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರ ವಿರುದ್ಧ ಆಕ್ರೋಶಕೋಸಂ: ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಭಾಲ್ಕಿ:ನ.23: ತಾಲ್ಲೂಕಿನ ಕೋಸಂ ಗ್ರಾಮದಲ್ಲಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರು ಪಂಚಾಯಿತಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂದು ಸಾಕಷ್ಟು ಸಲ ಪಂಚಾಯಿತಿ ಅಧಿಕಾರಿ, ಸದಸ್ಯರಿಗೆ ತಿಳಿಸಿದರೂ ಸ್ಪಂದನೆ ತೋರದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿರುವ ಮೂರು ಕೊಳವೆ ಬಾವಿಗಳಲ್ಲಿ ಒಂದು ಕೊಳವೆ ಬಾವಿಯಿಂದ ಮಾತ್ರ ಸಮರ್ಪಕ ನೀರು ಪೂರೈಕೆ ಆಗುತ್ತಿದೆ. ಒಂದು ಕೊಳವೆ ಬಾವಿ ಮೋಟಾರ್, ಸ್ಟಾಟರ್ ಸಮಸ್ಯೆಯಿಂದ ನೀರು ಹರಿಸುತ್ತಿಲ್ಲ. ಇನ್ನೊಂದರಲ್ಲಿ ನೀರಿನ ಲಭ್ಯತೆ ಕೊರತೆಯಿಂದ ಗ್ಯಾಪ್ ಕೊಡುತ್ತಿದೆ. ಹಾಗಾಗಿ, ಮನೆಗಳ ನಳಗಳಿಗೆ, ಸಣ್ಣ ನೀರು ಸಂಗ್ರಹಣಾ ಟ್ಯಾಂಕ್‍ಗೆ ಕಡಿಮೆ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿರುವುದರಿಂದ ನೀರಿಗಾಗಿ ಮಹಿಳೆಯರು, ಕುಟುಂಬ ಸದಸ್ಯರು ಪರದಾಡುವಂತಾಗಿದೆ. ಕೆಲ ಸಂದರ್ಭಗಳಲ್ಲಿ ಮಹಿಳೆಯರ ಮಧ್ಯೆ ಜಗಳ ಸಂಭವಿಸುತ್ತಿದೆ ಎಂದು ದೂರಿದರು.
ಪಂಚಾಯಿತಿ ಅಧಿಕಾರಿ, ಅಧ್ಯಕ್ಷರು ಸೇರಿದಂತೆ ಸದಸ್ಯರೆಲ್ಲ ಪಂಚಾಯಿತಿ ಅಭಿವೃದ್ಧಿ ಹಣ ಲಪಟಾಯಿಸುತ್ತಿದ್ದಾರೆ. ಪಂಚಾಯಿತಿ ಕೇಂದ್ರದಲ್ಲಿ ಎರಡು ವರ್ಷದಲ್ಲಿ ಎರಡು ಬಾರಿ ಮಾತ್ರೆ ಸಬೆ ಸೇರಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಗ್ರಾಮಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಅವರಿಗೆ ನೀರಿನ ಸಮಸ್ಯೆಯನ್ನು ಗ್ರಾಮದ ಮಹಿಳೆಯರು, ಯುವಕರು ಎಳೆ ಎಳೆಯಾಗಿ ಬಿಡಿಸಿಟ್ಟರು. ಕೊಳವೆ ಬಾವಿ ರಿಪೇರಿ ಮಾಡಿಸಿ ಸಂಜೆವರೆಗೆ ನೀರು ಕೊಡಿಸಿಯೇ ಹೋಗುತ್ತೇನೆ ಎಂದು ಅಲ್ಲಿಯೇ ಕುಳಿತಿರುವಾಗ ಶಾಸಕ ಈಶ್ವರ ಖಂಡ್ರೆ ಆಗಮಿಸಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ ನೂತನ ಕೊಳವೆ ಬಾವಿ ಕೊರೆಯಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಗ್ರಾಮಸ್ಥರು ಹಿಂಪಡೆದರು.
ಓಂಕಾರ ಕಲ್ಲಪ್ಪಾ, ಪವನ ವೀರಶೆಟ್ಟಿ ಬಿರಾದರ, ಬಸವರಾಜ ಸಿದ್ರಾಮಪ್ಪ, ವಿರೇಶ ಕಾಶಪ್ಪಾ ಬಿರಾದರ, ಬೀರಪ್ಪಾ ಶಂಕರ ಬೀರಗೊಂಡ, ಲೋಕೇಶ ಮಾರ್ಜೋಡೆ, ಸಂಗೀತಾ ಚಿದಾನಂದ ಸ್ವಾಮಿ, ಮಂಜುಳಾ ಸಂತೋಷ, ಪ್ರೇಮಲಾಬಾಯಿ ಸೇರಿದಂತೆ ಇದ್ದರು.