ಅಭಿವೃದ್ಧಿಗೆ ಶರಣು ಶ್ರಮ: ಖೂಬಾ

ಬೀದರ:ಮೇ.3: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಬಸವಕಲ್ಯಾಣ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಲಿದ್ದಾರೆ ಎಂದು ಸಂಸದ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹ 500 ಕೋಟಿ ಅನುದಾನ ಘೋಷಿಸಿ, ಈಗಾಗಲೇ ₹100 ಕೋಟಿ ಬಿಡುಗಡೆಯನ್ನೂ ಮಾಡಿದೆ. ಬಸವ ಭಕ್ತರ ಅಪೇಕ್ಷೆಯಂತೆ ಬರುವ ದಿನಗಳಲ್ಲಿ ಮಂಟಪ ನಿರ್ಮಾಣಗೊಳ್ಳಲಿದೆ. ಸಲಗರ ಈ ದಿಸೆಯಲ್ಲಿ ಕೆಲಸ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉತ್ತಮ ಹಾಗೂ ಜನಪರ ಆಡಳಿತವೇ ಚುನಾವಣೆ ಫಲಿತಾಂಶಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಜನ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.