ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ನೀಡಿ: ಕಂದಕೂರ

ಗುರುಮಠಕಲ್ :ಡಿ.30: ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂಬ ನನ್ನ ಹಲವು ವರ್ಷಗಳ ಕನಸನ್ನು ನನಸಾಗಿಸಿಕೊಳ್ಳಲು ನಾನು ಶಾಸಕನಾದ ನಂತರ ತುಂಬಾ ಒಡಾಡಿದೆ, ಅದಕ್ಕೆ ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರೂ ತುಂಬಾ ಬೆಂಬಲವನ್ನು ನೀಡಿದ್ದರು. ಈಗಲೂ ನನ್ನಿಂದ ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ, ಅದಕ್ಕೆ ಪೂರಕವಾದ ಸಲಹೆಗಳನ್ನು ನೀವು ನೀಡಿ ಎಂದು ಶಾಸಕ ನಾಗನಗೌಡ ಕಂದಕೂರ ಮನವಿ ಮಾಡಿದರು.

ಪಟ್ಟಣದ ಲಕ್ಷ್ಮೀನಗರ ಬಡಾವಣೆಯ ಸಾರ್ವಜನಿಕ ಉದ್ಯಾನವನವನ್ನು ರಿಬ್ಬನ್ ಕತ್ತರಿಸಿ ಜನ ಬಳಕೆಗೆ ಮುಕ್ತಗೊಳಿಸಿ ಮಾತನಾಡಿದ ಅವರು, 14 ತಿಂಗಳು ಕುಮಾರಸ್ವಾಮಿಯವರು ಅಧಿಕಾರದಲ್ಲಿರುವಾಗ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಅವಶ್ಯವಾದ ಅನುಧಾನವನ್ನು ನೀಡಿದ್ದಲ್ಲದೆ ಇನ್ನೂ ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದ್ದರು ಎಂದು ಹೇಳಿದರು.

ನಂತರ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ನಮ್ಮ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಹಿಂಪಡೆದಿದ್ದಾರೆ. ಅವರ ಅವಧಿಯಲ್ಲಿ ಒಂದು ರೂಪಾಯಿ ನೀಡದಿದ್ದರೂ ಚಿಂತೆಯಿಲ್ಲ ಆದರೆ, ಮೊದಲು ನೀಡಿದ್ದ ಅನುದಾನವನ್ನಾದರೂ ನೀಡಲಿ ಎಂದು ಆಗ್ರಹಿಸಿದರು.

ಹಣಕ್ಕಿಂತಲೂ ಆರೋಗ್ಯ ನಿಜವಾದ ಆಸ್ತಿ, ಈಚೆಗೆ ದೆಹಲಿಯ ವಾತಾವರಣದಲ್ಲಿ ಉಂಟಾದ ಮಾಲಿನ್ಯದಿಂದ ಮನೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಇಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆ, ವಾಹನ ಸೇರಿದಂತೆ ವಿವಿಧ ಮೂಲಗಳಿಂದ ಪರಿಸರದ ಆರೋಗ್ಯ ಕೆಡುತ್ತಿದೆ. ಅದು ಹೀಗೆ ಮುಂದುವರೆದರೆ ನಮ್ಮಲ್ಲಿಯೂ ಮುಂದಿನ ದಿನಗಳು ದುರಂತಮಯವಾಗಲಿದೆ ಎಂದು ಕಳವಳಗೊಂಡರು.

ಎಲ್ಲರೂ ಸೇರಿ ಉದ್ಯಾನವನ್ನು ರಕ್ಷಿಸಿಕೊಳ್ಳಬೇಕು, ಉದ್ಯಾನದ ಸೌಮದರ್ಯ, ಸ್ವಚ್ಛತೆ ಕಾಪಾಡಿಕೊಂಡರೆ ನಮ್ಮ ಆರೋಗ್ಯವೂ ಅದು ಕಾಪಾಡಲಿದೆ. ಉದ್ಯಾನದ ನಿರ್ವಹಣೆಗೆ ಸ್ಥಳೀಯರು ಸಲಹೆಗಳನ್ನು ನೀಡುವ ಮೂಲಕ ಉದ್ಯಾನವನ್ನು ಇನ್ನೂ ಉತ್ತಮವಾಗಿ ರೂಪಿಸಿ ಮಾದರಿಯಾಗಿಸಬಹುದು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಸನಗೌಡ ಯಡಿಯಾಪುರ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲೆಡೆಯೂ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಬೇಕಿದೆ, ಈಗಾಗಲೆ ಅಧಿಕಾರಿಗಳೊಡನೆ ಮಾತನಾಡಿ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮವ್ವ, ತಹಸೀಲ್ದಾರ ಸಂಗಮೇಶ ಜಿಡಗೆ, ತಾ.ಪಂ.ಅಧ್ಯಕ್ಷ ಈಶ್ವರ ನಾಯಕ, ಜೆಡಿಎಸ್ ಬ್ಲಾಕ್ ಅಧ್ಯಕ್ಷ, ಶರಣು ಆವಂಟಿ, ಬಾಲಪ್ಪ ನಿರೇಟಿ, ಜಿ.ತಮ್ಮಣ್ಣ, ಭೂಸೇನಾ ಎಇಇ ಶಿವರಾಜ, ಜೆಇ ಸೂಗುರೆಡ್ಡಿ ಸೇರಿದಂತೆ ಸ್ಥಳೀಯರು ಇದ್ದರು.

ದಾವಲಸಾಬ್ ಸ್ವಾಗತಿಸಿದರು, ವಿಜಯಕುಮಾರ ನಿರೇಟಿ ನಿರ್ವಹಿಸಿ, ವಂದಿಸಿದರು.