ಅಭಿವೃದ್ಧಿಗೆ ಪೂರಕವಾದ ಬಜೆಟ್ ಸಿದ್ಧತೆ 

ಸೊರಬ. ಡಿ.29; ಪುರಸಭೆ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಜೊತೆಗೆ ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ರೂಪಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ ಹೇಳಿದರು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ  ಪುರಸಭೆ ವತಿಯಿಂದ ಕರೆದಿದ್ದ 2023-24ನೇ ಸಾಲಿನ ಆಯ-ವ್ಯಯ ಪೂರ್ವ ಭಾವಿ ಸಭೆ ಮತ್ತು ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆಯಲ್ಲಿ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವರು ಮಾತನಾಡಿದರು.   ಪಟ್ಟಣ ಪಂಚಾಯ್ತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ತರುವಾಯ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯುತ್ತಿದೆ. ಈ ನಡುವೆ ಶಾಸಕ ಎಸ್. ಕುಮಾರ್ ಬಂಗಾರಪ್ಪ ಪುರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸುತ್ತಿದ್ದು, ನಡಹಳ್ಳಿ, ಹಳೇಸೊರಬ, ಕೊಡಕಣಿ, ಜಂಗಿನಕೊಪ್ಪ, ಮರೂರು ಗ್ರಾಮಗಳ ಅಭಿವೃದ್ಧಿಗೆ ಒತ್ತನ್ನು ನೀಡಲಾಗಿದೆ. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ 10 ಕೋಟಿ ರೂ., ಅನುದಾನದಲ್ಲಿ ಬಹುಪಾಲು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನೀಡಲಾಗಿದೆ ಎಂದರು.