ಅಭಿವೃದ್ದಿ ಹೊಂದಿದ ಭಾರತ ನಿರ್ಮಾಣಕ್ಕೆ ಸಂಕಲ್ಪ: ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ

ನವದೆಹಲಿ,ಆ.14-ದೇಶ ಹೊಸ ಸಂಕಲ್ಪಗಳೊಂದಿಗೆ ಅಮೃತ ಕಾಲ ಪ್ರವೇಶಿಸಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟವನ್ನಾಗಿ ಮಾಡಲುಬ ಪ್ರತಿಜ್ಞೆ ಮಾಡೋಣ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು  ಕರೆ ನೀಡಿದ್ದಾರೆ

ಜನರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಸಂಭ್ರದಿಂದ ಆಚರಿಸುತ್ತಿದ್ದಾರೆ. ಭಾರತದ ಪ್ರಜೆಯಾಗಿ ಎಲ್ಲರಿಗೂ ಸಮಾನ ಅವಕಾಶಗಳು , ಸಮಾನ ಹಕ್ಕುಗಳು ಮತ್ತು ಸಮಾನ ಕರ್ತವ್ಯಗಳಿವೆ. ನವಭಾರತದ ಮಹತ್ವಾಕಾಂಕ್ಷಿಗಳ ಹೊಸ ದಿಗಂತಗಳು ಅಪರಿಮಿತವಾಗಿವೆ ಎಂದಿದ್ದಾರೆ.

77ನೇ ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಇಂದು ದೇಶವನ್ನುದ್ದೇಶಿಸಿ ಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ, ಹೊಸ ಎತ್ತರವನ್ನು ಸೇರುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಚಂದ್ರಯಾನ -3 ಚಂದ್ರನ ಕಕ್ಷೆ ಸೇರಲಿದೆ.  ಆ ಕ್ಷಣಕ್ಕಾಗಿ ಇಡೀ ದೇಶ ಕಾತುರದಿಂದ ಕಾಯುತ್ತಿದೆ ಎಂದರು.

ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಗಳ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯತ್ತ ಸಾಗಲು ನಿರಂತರ ಪ್ರಯತ್ನಗಳನ್ನು ಮಾಡೋಣ. ದೇಶ ಪ್ರಗತಿಯೊಂದಿಗೆ ಶ್ರದ್ಧೆ ಮತ್ತು ಸಾಧನೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸೋಣ ಎಂದರು.

ಸಂಶೋಧನೆ, ನಾವೀನ್ಯತೆ, ಉದ್ಯಮಶೀಲತೆಯನ್ನು  ಉತ್ತೇಜಿಸಲು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು  ಸ್ಥಾಪಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ  50 ಸಾವಿರ ಕೋಟಿ ರೂಪಾಯಿ  ವೆಚ್ಚ ಮಾಡಲಿದೆ.  ಇದರಿಂದ ಕಾಲೇಜು, ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸುವುದು ನಮ್ಮ ಗುರಿ ಮಾತ್ರವಾಗಿಲ್ಲ, ಮಾನವೀಯತೆಯನ್ನು ಬೆಳೆಸುವುದು ಅಭಿವೃದ್ಧಿಯ ಭಾಗವಾಗಿದೆ ಎಂದಿದ್ದಾರೆ.

ಹಣದುಬ್ಬರ ನಿಯಂತ್ರಣಕ್ಕೆ ಕ್ರಮ

ಜಾಗತಿಕ  ದಿನಗಳಲ್ಲಿ ವಿಶ್ವಮಟ್ಟದ ಹಣದುಬ್ಬರ ಕಳವಳಕಾರಿ. ಸರ್ಕಾರ, ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ನಿಯಂತ್ರಿಸಲು  ಸಮರ್ಥವಾಗಿದೆ ಹಣದುಬ್ಬರದ ಪ್ರಭಾವ ಜನಸಾಮಾನ್ಯರ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಿವೆ ಎಂದಿದ್ದಾರೆ.

2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಲವು ಬದಲಾವಣೆಗಳಿಗೆ ನಾಂದಿ ಹಾಡಿದೆ. ಪ್ರಾಚೀನ ಮೌಲ್ಯಗಳನ್ನು ಆಧುನಿಕ ಕೌಶಲ್ಯಗಳೊಂದಿಗೆ ಸಂಯೋಜಿಸುವುದು, ಇದರೊಂದಿಗೆ ಮುಂದಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳಾಗಲಿದ್ದು, ಇಡೀ ದೇಶ ದೊಡ್ಡ ಬದಲಾವಣೆಯನ್ನು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ‌

ಭಾರತಕ್ಕೆ ಪ್ರಮುಖ ಸ್ಥಾನ

ಭಾರತ ಇಂದು ವಿಶ್ವ ವೇದಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ.  ಭಾರತ, ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಸಮಾನ ಪ್ರಗತಿಯತ್ತ ವ್ಯಾಪಾರ ಹಾಗೂ ಹಣಕಾಸು ಕ್ಷೇತ್ರಗಳಲ್ಲಿ ದಾಪುಗಾಲು ಇಡಲು ಸಹಕಾರಿಯಾಗಿದೆ.  ಅಂತಾರಾಷ್ಟ್ರೀಯ  ರಾಜತಾಂತ್ರಿಕ ಚಟುವಟಿಕೆಯಲ್ಲಿ ಜನರು  ಪಾಲ್ಗೊಳ್ಳುವುದನ್ನು ಉತ್ತೇಜಿಸಲು ಅಭಿಯಾನ ಪ್ರಾರಂಭಿಸಲಾಗಿದೆ ಎಂದರು.

ಮಹಿಳಾ ಸಬಲೀಕರಣಕ್ಕೆ ಒತ್ತು ಕರೆ:

ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಗಮನ ನೀಡುತ್ತಿರುವುದು ಸಂತಸ ತಂದಿದೆ. ಆರ್ಥಿಕ ಸಬಲೀಕರಣದೊಂದಿಗೆ ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಹೀಗಾಗಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಇಂದಿಗೂ ಅನೇಕ ಬುಡಕಟ್ಟು ಸಮುದಾಯಗಳು ನಿಸರ್ಗಕ್ಕೆ ಹತ್ತಿರವಾಗಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿವೆ. ಅವರ ಮೌಲ್ಯಗಳು ಮತ್ತು ಜೀವನಶೈಲಿ ಹವಾಮಾನ ಕ್ರಿಯೆಯ ಕ್ಷೇತ್ರದಲ್ಲಿ  ಅಮೂಲ್ಯ ಪಾಠಗಳನ್ನು ಒದಗಿಸಲಿದೆ.  ಬುಡಕಟ್ಟು ಸಮುದಾಯಗಳು ಯುಗ-ಯುಗಾಂತರಗಳ ಉಳಿವಿನ ರಹಸ್ಯವನ್ನು ಕೇವಲ ಒಂದು ಪದದಲ್ಲಿ ಸಂಕ್ಷಿಪ್ತಗೊಳಿಸಬಹುದು. ಆ ಪದ ಸಹಾನುಭೂತಿ ಎಂದು ಹೇಳಿದರು.

ಸಂವಿಧಾನ ಮಾರ್ಗದರ್ಶಿ:

ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ಪ್ರಾಚೀನ ಕಾಲದಿಂದಲೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ. ನವೋದ್ಯಮದಿಂದ ಕ್ರೀಡೆಯವರೆಗೆ ಯುವಜನತೆ  ಅನನ್ಯ ಸಾಧನೆ ಮಾಡಿದ್ದಾರೆ . ನಮ್ಮ ಸಂವಿಧಾನವು ಮಾರ್ಗದರ್ಶಿಯಾಗಿದೆ. ಸಂವಿಧಾನದ ಪೀಠಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ ಎಂದಿದ್ದಾರೆ.

ದೇಶದ  ನಿರ್ಮಾತೃಗಳ ಕನಸುಗಳನ್ನು ನನಸಾಗಿಸಲು ಸೌಹಾರ್ದತೆ ಮತ್ತು ಸಹೋದರತ್ವದ ಮನೋಭಾವದಿಂದ ಮುನ್ನಡೆಯೋಣ ಎಂದರು.
ಸ್ವಾತಂತ್ರ್ಯೋತ್ಸ ಸಂದರ್ಭದಲ್ಲಿ  ಗಡಿಯಲ್ಲಿ  ಕಾವಲು ಕಾಯುತ್ತಿರುವ ಸೇನಾ ಸಿಬ್ಬಂದಿ, ಆಂತರಿಕ ಭದ್ರತೆಯನ್ನು ಒದಗಿಸುವ ಎಲ್ಲ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿ  ಪ್ರಪಂಚದ ವಿವಿಧ ಭಾಗಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರು ಸೇರಿದಂತೆ ದೇಶವಾಸಿಗಳಿಗೆ   ಶುಭ ಕಾಮನೆಗಳನ್ನು  ರಾಷ್ಟ್ರಪತಿ ದ್ರೌಪದಿ ಮುರ್ಮು ಕೋರಿದರು.