ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ


ಬಾಗಲಕೋಟೆ,ಜ.18 : ಬಾಗಲಕೋಟೆ ನಗರವನ್ನು ಮಾದರಿ ನಗರವನ್ನಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ವಿದ್ಯಾಗಿರಿ ಇಂಜಿನೀಯರಿಂಗ್ ಸರ್ಕಲ್‍ನಲ್ಲಿ ಮಂಗಳವಾರ ಜಲ ಸಂಪನ್ಮೂಲ ಇಲಾಖೆ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡ ನವನಗರದ ಇಂಜಿನೀಯರಿಂಗ್ ಕಾಲೇಜ ಸರ್ಕಲ್‍ನಿಂದ ಎನ್‍ಎಚ್367 ರವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾಳಿದಾಸ ಸರ್ಕಲ್‍ನಿಂದ ಬೆಳಗಾವಿ ಹೈವೆ ವರೆಗೆ 5.65 ಕೋಟಿ ರೂ.ಗಳ ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲಿನ ರಸ್ತೆಯನ್ನು ಮಾರ್ಪಾಡು ಮಾಡಿ ರಸ್ತೆಯ ಎರಡು ಬದಿಯಲ್ಲಿ ಚರಂಡಿ ಮತ್ತು ಡಕ್ಟ್ ನಿರ್ಮಾಣ ಮಾಡಲಾಗುತ್ತಿದೆ. ಇಂಜಿನೀಯರಿಂಗ್ ಕಾಲೇಜ ವೃತ್ತದಲ್ಲಿ ಬಸ್ ಸೆಲ್ಟರ್ ಮತ್ತು ಸುಲಭ ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದರು.
ನವನಗರದ ದಕ್ಷಿಣ ಭಾಗದಲ್ಲಿರುವ ಆಶ್ರಯ ಕಾಲೋನಿಯಲ್ಲಿ 4.80 ಕೋಟಿ ರೂ.ಗಳ ವೆಚ್ಚದ ಉದ್ಯಾನವನ ಅಭಿವೃದ್ದಿ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಹ ನೆರವೇರಿಸಲಾಗಿದೆ. ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮವಹಿಸಲಿದ್ದಾರೆ. ಒಟ್ಟು 11 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪುಟ್‍ಪಾತ್ ಮೇಲೆ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಅಭಿವೃದ್ದಿ ಕಾರ್ಯಗಳಿಗೆ ಸಹಕರಿಸಬೇಕು ಎಂದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ಹೊಸದಾಗಿ ಒಟ್ಟು 82 ವಿವಿಧ ಅಭಿವೃದ್ದಿ ಕಾಮಗಾರಿಗಳು ಅನುಮೋದನೆಗೊಂಡಿದ್ದು, ಈ ಪೈಕಿ 57 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು 25 ಕಾಮಗಾರಿಗಳಿಗೆ ಅನುಮೋದನೆ ಕಳುಹಿಸಲಾಗಿದೆ. ನಗರದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಬಾಗಲಕೋಟೆ ನಗರವನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನಿಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಸಹ ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿವಾನಂದ ಟವಳಿ, ಕುಮಾರ ಎಳ್ಳಿಗುತ್ತಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಸಭಾಪತಿ ಅಂಬಾಜಿ ಜೋಶಿ, ಸದಸ್ಯರಾದ ಈರಣ್ಣ ತಿರಕಣ್ಣವರ, ಶೋಭಾರಾವ್, ಕುಪ್ಪಸ್ತ, ಬಿಟಿಡಿಎ ಮಾಜಿ ಸದಸ್ಯ ಜೆ.ಎನ್.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.