ಅಭಿವೃದ್ದಿಪರ ಪಕ್ಷವನ್ನು ಬೆಂಬಲಿಸಿದ ಕಲ್ಯಾಣದ ಜನ: ಚವ್ಹಾಣ

ಬೀದರ:ಮೇ.3: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಮತದಾರರು ಅಭಿವೃದ್ಧಿ ಪರ ಪಕ್ಷವನ್ನು ಬೆಂಬಲಿಸಿ ದ್ದಾರೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಪ್ರತಿಕ್ರಿಯಿಸಿದರು.

ಇಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಲಾಕ್‍ಡೌನ್ ಅವಧಿಯಲ್ಲಿನ ಶರಣು ಸಲಗರ ಅವರ ಸೇವೆಯನ್ನು ಜನ ಗೌರವಿಸಿದ್ದಾರೆ. ಬಡವರ ಪರ ಕಾಳಜಿ ಹಾಗೂ ಅಭಿವೃದ್ಧಿ ಚಿಂತನೆ ಹೊಂದಿರುವ ಅವರಿಗೆ ವಿಜಯ ಮಾಲೆ ತೊಡಿಸಿ, ಯೋಗ್ಯ ಪ್ರತಿನಿಧಿ ಯನ್ನು ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು.

‘ಉಪ ಚುನಾವಣೆ ಮುಗಿಯುವ ವರೆಗೂ ಬಸವಕಲ್ಯಾಣದಲ್ಲಿ ವಾಸ್ತವ್ಯ ಮಾಡಿದ್ದೆ. ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದ್ದೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಸಂಸದ ಭಗವಂತ ಖೂಬಾ ಸೇರಿ ಅನೇಕ ಗಣ್ಯರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು’ ಎಂದು ಅವರು ಸ್ಮರಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಮುಖ್ಯಮಂತ್ರಿ ಬಸವಕಲ್ಯಾಣ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಈಗಾಗಲೇ ಜನರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಅನುಭವ ಮಂಟಪಕ್ಕೆ ಅನುದಾನ ಒದಗಿಸಿ, ಕಾಮಗಾರಿಗೆ ಚಾಲನೆಯನ್ನೂ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ’ ಎಂದು ಹೇಳಿದರು.

‘ನಾನು ಬಸವಕಲ್ಯಾಣ ಅಭಿವೃದ್ಧಿಗೆ ಬದ್ಧನಾಗಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶರಣು ಸಲಗರ ಅವರೊಂದಿಗೆ ಇರಲಿದ್ದೇನೆ. ಬಸವಕಲ್ಯಾಣದಲ್ಲಿ ಇನ್ನೂ ಆಗಬೇಕಿರುವ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಅನುದಾನ ಬಿಡುಗಡೆಗೆ ಕೋರುತ್ತೇನೆ’ ಎಂದು ಸಚಿವ ಚವಾಣ್‌ ಅವರು ತಿಳಿಸಿದರು.