ಅಭಿವೃದ್ದಿಗೆ ಬಲಿಯಾದ 150 ವರ್ಷ ಪುರಾತನ ಅರಳಿಮರ..!’

ಶಿವಮೊಗ್ಗ, ಡಿ.೧: ಸರಿಸುಮಾರು 150 ವರ್ಷ ಹೆಚ್ಚು ಪುರಾತನದ್ದೆಂದು ಹೇಳಲಾದ, ಗಟ್ಟಿಮುಟ್ಟಾಗಿದ್ದ, ಅಪಾರ ಪಕ್ಷಿ – ಜೀವ ಸಂಕುಲಗಳಿಗೆ ಆಶ್ರಯ ತಾಣವಾಗಿದ್ದ
ಬೃಹದಾಕಾರದ ಅರಳಿಮರವೊಂದು ಅಭಿವೃದ್ದಿಗಾಗಿ ತನ್ನ ಜೀವ ತೆತ್ತಿದೆ..!ಶಿವಮೊಗ್ಗ ನಗರ ಕಾಶೀಪುರ ರೈಲ್ವೆ ಗೇಟ್ ಬಳಿಯಿದ್ದ ಅರಳಿಮರವನ್ನು, ಮಂಗಳವಾರ ರೈಲ್ವೆ
ಮೇಲ್ಸೇತುವೆ ಕಾಮಗಾರಿಗೆ ಕಡಿದುರುಳಿಸಲಾಗಿದೆ. ಜೆಸಿಬಿ ಸಹಾಯದೊಂದಿಗೆ ಸುಮಾರು 10ಕ್ಕೂ ಅಧಿಕ ಮರ ಕಟಾವು ಮಾಡುವ ಕೆಲಸದವರು, ಮರ ತೆರವು ಕಟಾವು ಕಾರ್ಯಾಚರಣೆ ನಡೆಸಿದರು. ಬೆಳಿಗ್ಗೆಯಿಂದ ಆರಂಭವಾದ ತೆರವು ಕಾರ್ಯವು, ಸಂಜೆಯ ನಂತರವೂ ಮುಂದುವರಿದಿತ್ತು. ಅರ್ಧದಷ್ಟು ಮರವನ್ನು ಮಾತ್ರ ತೆರವುಗೊಳಿಸಿದ್ದು, ಉಳಿದ ಭಾಗವನ್ನು ನಾಳೆ ಕಟಾವು ಮಾಡಲಾಗುವುದು ಎಂದು ಕೆಲಸ ನಡೆಸುತ್ತಿದ್ದ ಕಾರ್ಮಿಕರು ಹೇಳಿದರು. ನೆರಳಾಗಿತ್ತು: ಕಾಶೀಪುರ ರೈಲ್ವೆ ಗೇಟ್ ಬಳಿ, ಕೇಂದ್ರ – ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಸಮರೋಪಾದಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಹಳಿ ಸಮೀಪದಲ್ಲಿಯೇ ಇದ್ದ, ಅರಳಿಮರ ತೆರವುಗೊಳಿಸಲು ಕಾಮಗಾರಿ ಅನುಷ್ಠಾನಗೊಳಿಸುತ್ತಿರುವ ರೈಲ್ವೆ ಇಲಾಖೆ ನಿರ್ಧರಿಸಿತ್ತು. ಅರಣ್ಯ ಇಲಾಖೆ ಅನುಮತಿ ಪಡೆದುಕೊಂಡು ಮರ ಕಡಿದುರುಳಿಸುವ ಕಾರ್ಯ ಆರಂಭಿಸಿದೆ.
ಪ್ರಶ್ನಿಸುವವರೇ ಇಲ್ಲ!: 150 ವರ್ಷದಷ್ಟು ಪುರಾತನ ಅರಳಿಮರ ಕಡಿದುರುಳಿಸಲಾಗುತ್ತಿದೆ.ಆದರೆ ಮರ ರಕ್ಷಿಸಬೇಕೆಂಬ ಸಣ್ಣ ಕೂಗು ಸ್ಥಳೀಯರಿಂದ ಕೇಳಿಬರಲಿಲ್ಲ. ಪರಿಸರ
ಹೋರಾಟಗಾರರು ಕೂಡ ಇತ್ತ ಗಮನ ಹರಿಸಲಿಲ್ಲ. ಅರಣ್ಯ ಇಲಾಖೆ ಕೂಡ, ಈ ಬೃಹತ್ ಮರ ಉಳಿಸಿಕೊಳ್ಳುವ ಕಿಂಚಿತ್ತೂ ಕಾಳಜಿ ತೋರಲಿಲ್ಲ. ಸಕಲಪಕ್ಷಿ ಸಂಕುಲಗಳ ಆಶ್ರಯದಾತೆಯಾಗಿದ್ದ ಅರಳಿಮರ, ನಾಗರೀಕರಿಗೆ ಬೇಡವಾಗಿದ್ದು ನಿಜಕ್ಕೂ ದುರದೃಷ್ಟಕರ  ಸಂಗತಿಯಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ನೋವು ವ್ಯಕ್ತಪಡಿಸುತ್ತಾರೆ.

Attachments area