ಅಭಿಮಾನ ಮತಗಳಾಗುವುದೇ? ಸಿರುಗುಪ್ಪ ಮುಂದಿನ ಎಂಎಲ್‍ಎ ಗಿರಿಗೆ ನಾಯಕರ ಕಸರತ್ತು”


ಸಿ.ಶಿವರಾಮ, ಸಿರಿಗೇರಿ
ಸಿರಿಗೇರಿ ಸೆ09. ಮುಂದಿನ ವರ್ಷ ಏಪ್ರಿಲ್ ಮೇ ನಲ್ಲಿ ನಡೆಯಬಹುದಾದ ರಾಜ್ಯದ ವಿಧಾನಸಭಾ ಚುನಾವಣೆಗೆ ಸಿರುಗುಪ್ಪ ತಾಲೂಕಿನಲ್ಲಿ ಟಿಕೆಟ್ ಆಕಾಂಕ್ಷಿಗಳ ತಾಲೀಮು ಜೋರಾಗಿಯೇ ನಡೆದಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡರ ಮದ್ಯೆಯೇ ನೇರಾನೇರ ಪೈಪೋಟಿ ಇತ್ತು. ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚುಬಾರಿ ಗೆಲ್ಲುವ ಮೂಲಕ ತಾಲೂಕು ಕಾಂಗ್ರೇಸ್‍ನ ಭದ್ರ ಸ್ಥಾನವಾಗಿತ್ತು. ನಂತರದ 2 ಅವಧಿಗೆ ಜನತಾದಳದ ಅಭ್ಯರ್ಥಿಗಳು ಗೆದ್ದುಕೊಂಡಿತ್ತು. ತಾಲೂಕಿಗೆ ಎಸ್‍ಟಿ ಮೀಸಲಾತಿ ಘೋಷಣೆಯಾದ ನಂತರ 2ಅವಧಿಗೆ ಬಿಜೆಪಿ ಪಕ್ಷದಿಂದ ಎಂ.ಎಸ್.ಸೋಮಲಿಂಗಪ್ಪ, ಒಂದು ಅವಧಿಗೆ ಕಾಂಗ್ರೇಸ್‍ನ ಬಿ.ಎಂ.ನಾಗರಾಜ ಗೆಲುವು ಪಡೆದಿದ್ದರು. ಪುನಹ ಎಂ.ಎಸ್.ಸೋಮಲಿಂಗಪ್ಪ ಗೆದ್ದು ಹಾಲಿಯಾಗಿದ್ದಾರೆ. ಈಗ ಮುಂದಿನ ಅವಧಿಯ ಎಂಎಲ್‍ಎ ಚುನಾವಣೆಗೆ ಜನಪ್ರತಿನಿಧಿಗಳಿಗಿಂತ ಜನರ ಬಾಯಲ್ಲಿ ಊಹಾಪೋಹದ ಅಭಿಪ್ರಾಯಗಳು ಹರಿದಾಡುತ್ತಿವೆ.
ಲೀಡರ್‍ಶಿಪ್‍ಗಾಗಿ ಯುವನೇತಾರರ ಪ್ರಯತ್ನ: ತಾಲೂಕಿನಲ್ಲಿ ಮುಂದಿನ ಭಾರಿಗೆ ಶಾಸಕ ಸ್ಥಾನಕ್ಕೆ ಭಾರಿ ಪೈಪೋಟಿ ಎಂಬಂತೆ  ಯುವನೇತಾರರ ಮದ್ಯೆ ಪೈಪೋಟಿ ಇದ್ದು, ಈಸಲ ಸೋಮಲಿಂಗಪ್ಪನವರು ಎಲೆಕ್ಷನ್‍ಗೆ ನಿಲ್ಲುವುದಿಲ್ಲವೆಂದೂ, ಅವರ ಮಗ ಎಂ.ಎಸ್.ಸಿದ್ದಪ್ಪರನ್ನು ಅಣಿಗೊಳಿಸುತ್ತಿದ್ದಾರೆಂದು ಜನಚರ್ಚೆ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಎಂ.ಎಸ್.ಸಿದ್ದಪ್ಪ ಹೆಚ್ಚೆಚ್ಚು ಕಾರ್ಯಕ್ರಮಗಲ್ಲಿ, ಸಭೆ ಸಮಾರಂಭಗಳಲ್ಲಿ ಮಿಂಚುತ್ತಿದ್ದು, ಕಾರ್ಯಕ್ರಮಗಳಿಗೆ ದೇಣಿಗೆ, ಕಷ್ಟದಲ್ಲಿದ್ದವರಿಗೆ ಪರಿಹಾರ ನೀಡುವುದು ಜನಚರ್ಚೆಗೆ ಪುಷ್ಟಿ ನೀಡುತ್ತಿದೆ. ಇನ್ನು ಕಳೆದಬಾರಿ ಸೋತಿದ್ದ ಕಾಂಗ್ರೆಸ್ ಯುವಮುಖಂಡ ಮುರಳಿಕೃಷ್ಣ ಸಹ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಯುವಕರ ಗುಂಪಿನೊಂದಿಗೆ ಓಡಾಡುತ್ತಾ ದೇಣಿಗೆ, ಪರಿಹಾರ ನೀಡುತ್ತಾ ತಮ್ಮ ಇರುವಿಕೆ ತೋರುತ್ತಿದ್ದಾರೆ.
ಗೆದ್ದೇ ತೀರಬೇಕೆಂಬ ಛಲದಲ್ಲಿ: ಕಳೆದೆರಡು ವರ್ಷಗಳಿಂದ ನೂರಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಯುವಕರಿಗೆ ದೇಣಿಗೆ, ಕಷ್ಟ, ನೋವು ಎಂದವರಿಗೆ ಕೈಲಾದ ಪರಿಹಾರ ನೀಡುತ್ತಾ ಈಸಲ ಎಂಎಲ್‍ಎ ಚುನಾವಣೆ ಎದುರಿಸಿ ಗೆದ್ದೇತೀರಬೇಕೆಂಬ ಆಸೆಯೊಂದಿಗೆ ಉಡೆಗೋಳ ಗ್ರಾಮದ ಧರಪ್ಪನಾಯಕ ಆಮ್ ಆದ್ಮಿ ಪಕ್ಷದ ಬಾವುಟದೊಂದಿಗೆ ತಾಲೂಕಿನ ಪ್ರತಿ ಗ್ರಾಮ ಹಳ್ಳಿಗಳಲ್ಲಿ ಹಗಲಿರುಳೆನ್ನದೇ ಎಲೆಕ್ಷನ್‍ಗೆ ನಿಂತವರಂತೆ ವರ್ಕ್ ಮಾಡುತ್ತಿದ್ದಾರೆ. ಬಿಜೆಪಿಯಿಂದ ಎಂ.ಎಸ್.ಸಿದ್ದಪ್ಪ, ಕಾಂಗ್ರೇಸ್‍ನಿಂದ ಮುರಳೀಕೃಷ್ಣ, ಆಪ್ ಪಕ್ಷದಿಂದ ಧರಪ್ಪನಾಯಕ ಇವರ ಮದ್ಯೆ ಚುನಾವಣೆ ನಡೆಯುತ್ತದೆಂಬುದು ಜನರ ಲೆಕ್ಕಾಚಾರ. ಇದಲ್ಲದೇ ಈಸಲ ಇತರೆ ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿದ್ದು ಬಿಜೆಪಿಯಿಂದ ಜೆ.ಶಾಂತ, ಕಾಂಗ್ರೇಸ್‍ನಿಂದ ಬಿ.ನಾಗೇಂದ್ರ ಬರುತ್ತಾರೆಂದು, ಬಿ. ಶ್ರೀರಾಮುಲು ರವರು ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದೆಂದು ಜನರ ಬಾಯಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಯುವಪಡೆಯು ತಮ್ಮ ಲೀಡರ್ ಬಂದಾಗ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಹಾರ ತುರಾಯಿ ಶಾಲು ಹಾಕಿ ಭಾರಿ ಬೆಂಬಲ ವ್ಯಕ್ತಪಡಿಸಿ ಅಭಿಮಾನ ತೋರುತ್ತಿದ್ದು, ಈ ಅಭಿಮಾನವು ಮತಗಳಾಗಿ ಪರಿಣಮಿಸಿ ಯಾರ ಗೆಲುವಿಗೆ ಕಾರಣವಾಗುವುದೋ ಕಾದು ನೊಡಬೇಕಿದೆ. 

Attachments area