ಅಭಿಮಾನ ಮತಗಳಾಗಿ ಪರಿಣಮಿಸುವುದೇ: ಸಿರುಗುಪ್ಪ ಮುಂದಿನ ಎಂಎಲ್‍ಎ ಗಿರಿಗೆ ಕಸರತ್ತು”


ಸಿ.ಶಿವರಾಮ, ಸಿರಿಗೇರಿ
ಸಿರಿಗೇರಿ ಸೆ07. ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ನಡೆಯಬಹುದಾದ ರಾಜ್ಯದ ವಿಧಾನಸಭಾ ಚುನಾವಣೆಗೆ ಸಿರುಗುಪ್ಪ ತಾಲೂಕಿನಲ್ಲಿ ಟಿಕೆಟ್ ಆಕಾಂಕ್ಷಿಗಳ ತಾಲೀಮು ಜೋರಾಗಿಯೇ ನಡೆದಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡರ ಮದ್ಯೆಯೇ ನೇರಾನೇರ ಪೈಪೋಟಿ ಇತ್ತು. ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚುಬಾರಿ ಗೆಲ್ಲುವ ಮೂಲಕ ತಾಲೂಕು ಕಾಂಗ್ರೇಸ್‍ನ ಭದ್ರ ಸ್ಥಾನವೆಂದು ಹೆಸರಾಗಿತ್ತು. ನಂತರದ 2-3 ಅವಧಿಗೆ ಜನತಾದಳದ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಎಂಎಲ್‍ಎ ಗಿರಿಯನ್ನು ಅನುಭವಿಸಿ ಭೀಗಿದ್ದರು. ತಾಲೂಕಿಗೆ ಎಸ್‍ಟಿ ಮೀಸಲಾತಿ ಘೋಷಣೆಯಾದ ನಂತÀರದ 2ಅವಧಿಗೆ ಬಿಜೆಪಿ ಪಕ್ಷದಿಂದ ಎಂ.ಎಸ್.ಸೋಮಲಿಂಗಪ್ಪ ರವರು ಗೆದ್ದು ತಾಲೂಕಿನಲ್ಲಿ ಹೊಸ ಪಕ್ಷದ ಬುನಾದಿ ಹಾಕಿದ್ದರು.
ನಂತರದ ಒಂದು ಅವಧಿಗೆ ಕಾಂಗ್ರೇಸ್‍ನ ಬಿ.ಎಂ.ನಾಗರಾಜ ಗೆದ್ದು, ಎರಡನೇ ಅವಧಿಗೂ ಶಾಸಕರಾಗುವ ಮಟ್ಟಿಗೆ ಹೆಸರು ಮಾಡಿಕೊಂಡು ಚುನಾವಣೆ ಬಂದಾಗ ತಮ್ಮ ವೈಯುಕ್ತಿಕ ಕಾರಣಗಳಿಂದ ಚುನಾವಣೆಯಿಂದ ದೂರ ಉಳಿದು, ಬಳ್ಳಾರಿ ಶಾಸಕ ಬಿ.ನಾಗೇಂದ್ರ ರವರ ಸಂಬಂಧಿ ಬಿ.ಮುರಳಿಕೃಷ್ಣರಿಗೆ ಅವಕಾಶ ನೀಡಿದರು. ಆದರೆ ಮತ್ತೊಮ್ಮೆ ಬಿಜೆಪಿಯ ಎಂ.ಎಸ್.ಸೋಮಲಿಂಗಪ್ಪ ಗೆದ್ದು ತಮ್ಮ ಆಡಳಿತ ನಡೆಸುತ್ತಿದ್ದಾರೆ. ಮುಂದಿನ ಅವಧಿಗೆ ನಡೆಯಲಿರುವ ಎಂಎಲ್‍ಎ ಚುನಾವಣೆಗೆ ಜನಪ್ರತಿನಿಧಿಗಳಿಗಿಂತ ಜನರೇ ಹೆಚ್ಚು ಚರ್ಚೆಯಲ್ಲಿ ತೊಡಗಿ ಊಹಾಪೋಹದ ಅಭಿಪ್ರಾಯಗಳು ಹರಿದುಬರುತ್ತಿವೆ.
ಲೀಡರ್‍ಶಿಪ್‍ಗಾಗಿ ಯುವನೇತಾರರ ಪ್ರಯತ್ನ: ತಾಲೂಕಿನಲ್ಲಿ ಮುಂದಿನ ಶಾಸಕ ಸ್ಥಾನಕ್ಕೆ ಮೇಲ್ನೋಟಕ್ಕೆ ಯುವನೇತಾರರ ಮದ್ಯೆ ಪೈಪೋಟಿ ಇದ್ದು, ಈಸಲ ಸೋಮಲಿಂಗಪ್ಪನವರು ಎಲೆಕ್ಷನ್‍ಗೆ ನಿಲ್ಲುವುದಿಲ್ಲವೆಂದೂ, ಅವರ ಮಗ ಎಂ.ಎಸ್.ಸಿದ್ದಪ್ಪರನ್ನು ಅಣಿಗೊಳಿಸುತ್ತಿದ್ದಾರೆಂದು ಜನಚರ್ಚೆ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಎಂ.ಎಸ್.ಸಿದ್ದಪ್ಪ ಹೆಚ್ಚೆಚ್ಚು ಕಾರ್ಯಕ್ರಮಗಳಿಗೆ ಹೋಗುವುದು, ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ದೇಣಿಗೆ ನೀಡುವುದು, ಕಷ್ಟದಲ್ಲಿದ್ದವರಿಗೆ ಪರಿಹಾರ ನೀಡುವುದು ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತಿದೆ. ಇನ್ನು ಕಳೆದಬಾರಿ ಸೋತಿದ್ದ ಕಾಂಗ್ರೆಸ್ ಯುವಮುಖಂಡ ಮುರಳಿಕೃಷ್ಣ ಸಹ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಯುವಕರ ಮದ್ಯೆ ಗುರುತಿಸಿಕೊಂಡು, ಕಾರ್ಯಕ್ರಮಗಳಿಗೆ ದೇಣಿಗೆ, ಸಣ್ಣ ಪರಿಹಾರ ನೀಡುತ್ತಾ ತಮ್ಮ ಆಕಾಂಕ್ಷೆಯ ಛಾಪು ಮೂಡಿಸುತ್ತಿದ್ದಾರೆ.
ಗೆದ್ದೇತೀರಬೇಕೆಂಬ ಛಲದಲ್ಲಿ ಇನ್ನೋರ್ವ ಮುಖಂಡ: ಕಳೆದೆರಡು ವರ್ಷಗಳಿಂದ ಜನರ ಮದ್ಯೆ ಇದ್ದು, ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ, ಯುವಕರಿಗೆ ದೇಣಿಗೆ, ಕಷ್ಟ, ನೋವು ಎಂದವರಿಗೆ ಸಣ್ಣಪರಿಹಾರ ನೀಡುತ್ತಾ ಮುಂದಿನ ಎಂಎಲ್‍ಎ ಚುನಾವಣೆಯನ್ನು ಎದುರಿಸಿಯೇ ಸಿದ್ದರೆಂದು ತಾಲೂಕಿನ ಉಡೆಗೋಳ ಗ್ರಾಮದ ಧರಪ್ಪನಾಯಕ ತಮ್ಮದೇ ಯುವ ಪಡೆಯನ್ನು ಕಟ್ಟಿಕೊಂಡು ಆಮ್ ಆದ್ಮಿ ಪಕ್ಷದ ಬಾವುಟದೊಂದಿಗೆ ತಾಲೂಕಿನ ಪ್ರತಿ ಗ್ರಾಮ ಹಳ್ಳಿಗಳಲ್ಲಿ ಹಗಲಿರುಳೆನ್ನದೇ ಎಲೆಕ್ಷನ್‍ಗೆ ನಿಂತವರಂತೆ ವರ್ಕ್ ಮಾಡುತ್ತಿದ್ದಾರೆ. ಜನರ ಮಾತಿನಂತೆ ಬಿಜೆಪಿಯ ಎಂ.ಎಸ್.ಸಿದ್ದಪ್ಪ, ಕಾಂಗ್ರೇಸ್‍ನಲ್ಲಿ ಮುರಳೀಕೃಷ್ಣ, ಆಪ್ ಪಕ್ಷದಿಂದ ಧರಪ್ಪನಾಯಕ ಇವರ ಮದ್ಯೆ ಚುನಾವಣೆ ನಡೆಯುತ್ತದೆ ಎಬುಂದು. ಇದಲ್ಲದೇ ಈಸಲ ತಾಲೂಕಿನಲ್ಲಿ ಇತರೆ ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿದ್ದು ಬಿಜೆಪಿಯಿಂದ ಜೆ.ಶಾಂತ ಬುರತ್ತಾರೆಂದು, ಕಾಂಗ್ರೇಸ್‍ನಿಂದ ಬಿ.ನಾಗೇಂದ್ರ ಬರುತ್ತಾರೆಂದು, ಬಿ. ಶ್ರೀರಾಮುಲು ರವರು ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದೆಂದು ಜನರ ಬಾಯಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಯುವಪಡೆಯು ತಮ್ಮ ಲೀಡರ್‍ಗಳು ಬಂದಾಗ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಹಾರ ತುರಾಯಿ ಶಾಲು ಹಾಕಿ ಭಾರಿ ಬೆಂಬಲ ವ್ಯಕ್ತಪಡಿಸಿ ಅಭಿಮಾನ ತೋರುತ್ತಿದ್ದು, ಈ ಅಭಿಮಾನವು ಮತಗಳಾಗಿ ಪರಿಣಮಿಸಿ ಯಾರ ಗೆಲುವಿಗೆ ಕಾರಣವಾಗುವುದೋ ಕಾದು ನೊಡಬೇಕಿದೆ.