ಅಭಿಮಾನಿ ಕೊಟ್ಟ ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಫ್ಲೆಕ್ಸ್ ಹಾಕಿದ ಟಗರು ಸ್ವೀಕರಿಸದ ವಿಪಕ್ಷ ನಾಯಕ

ಕಲಬುರಗಿ,ಅ.13: ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ಫ್ಲೆಕ್ಸ್ ಕಟ್ಟಿದ್ದ ಟಗರನ್ನು ಉಡುಗೊರೆಯಾಗಿ ಪಡೆಯಲು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಹಿಂದೇಟು ಹಾಕಿದ ಘಟನೆ ಅಫಜಲಪುರ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‍ನಲ್ಲಿ ಜೆ.ಎಂ. ಕೊರಬು ಫೌಂಡೇಶನ್ ವತಿಯಿಂದ ಹತ್ತು ಸಾವಿರ ಬಡ ಜನರಿಗೆ ಆಹಾರ ಸಾಮಗ್ರಿ ಕಿಟ್‍ಗಳ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಿದ್ಧರಾಮಯ್ಯ ಅವರ ಅಭಿಮಾನಿ ರಮೇಶ್ ಎಂಬುವವರು ಎರಡು ಟಗರುಗಳನ್ನು, ಉಡುಗೊರೆಯಾಗಿ ನೀಡಲು ತಂದಿದ್ದರು. ಅದನ್ನು ಕೊಡಲು ವೇದಿಕೆ ಮೇಲೆ ಹೋದಾಗ ಸಮೀಪಕ್ಕೂ ತರಲು ಬಿಡದೇ ತೆಗೆದುಕೊಂಡು ಹೋಗುವಂತೆ ಸಿದ್ಧರಾಮಯ್ಯ ಅವರು ಸೂಚಿಸಿದರು.
ಅಭಿಮಾನದಿಂದ ಕೊಡುತ್ತಿದ್ದಾರೆ. ಸ್ವೀಕರಿಸಿ ಎಂದು ವೇದಿಕೆಯ ಮೇಲಿನ ಗಣ್ಯರು ಹೇಳಿದರೂ ಕೂಡ ಸಿದ್ಧರಾಮಯ್ಯ ಅವರು ಮಾತ್ರ ಅದನ್ನು ಸ್ವೀಕರಿಸದೇ ಹಿಂದಕ್ಕೆ ಕಳಿಸಿದರು. ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ಫ್ಲೆಕ್ಸ್ ಟಗರುಗಳ ಮೇಲೆ ಕಟ್ಟಿದ ಕಾರಣಕ್ಕೆ ಸಿದ್ಧರಾಮಯ್ಯ ಅವರು ಉಡುಗೊರೆ ಪಡೆಯಲು ಹಿಂದೇಟು ಹಾಕಿದರು.
ಇದರಿಂದ ಅಸಮಾಧಾನಗೊಂಡ ಅಭಿಮಾನಿಗಳು ವೇದಿಕೆಯಿಂದ ಕೆಳಗೆ ಇಳಿದು ಕಾರ್ಯಕ್ರಮ ಮುಗಿಯುವವರೆಗೂ ವೇದಿಕೆ ಹತ್ತಿರ ಕಾಯ್ದರು. ಸಾಕಷ್ಟು ಒತ್ತಡ ಹಾಕಿ ಕೊನೆಗೆ ಸಿದ್ಧರಾಮಯ್ಯ ಅವರ ಮನವೊಲಿಸಿ ಕೊನೆಯಲ್ಲಿ ಉಡುಗೊರೆ ನೀಡಿದರು. ಆದಾಗ್ಯೂ, ಟಗರಿನ ಮೇಲೆ ಹಾಕಿದ್ದ ಪ್ಲೆಕ್ಸ್ ಕೂಡ ತೆಗೆದನಂತರ ಸ್ವೀಕರಿಸಿದರು.
ಟಗರುಗಳನ್ನು ಉಡುಗೊರೆಯಾಗಿ ಕೊಟ್ಟ ಅಭಿಮಾನಿಗಳು ಸಂತೋಷಗೊಂಡು ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.