ಅಭಿನಂದನೆ ಕಾರ್ಯಕ್ರಮ

ಹುಬ್ಬಳ್ಳಿ,ಏ28 : ದಿನದಿಂದ ದಿನಕ್ಕೆ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯ ನಡುವೆ ಸುಧೀರ್ಘ ಅವಧಿಗೆ ಅಪಘಾತ ರಹಿತ ಬಸ್ ಚಾಲನೆ ಮಾಡುವ ಚಾಲಕರು ಸಂಸ್ಥೆಯ ಸುರಕ್ಷತಾ ರಾಯಭಾರಿಗಳು ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸುರಕ್ಷತಾ ಪ್ರಶಸ್ತಿ ಪುರಸ್ಕೃತ ಇಬ್ಬರು ಚಾಲಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಚಿಕ್ಕೋಡಿ ವಿಭಾಗದ ಅಥಣಿ ಘಟಕದ ಕೇದಾರಿ ತಮ್ಮಣ್ಣ ಬಕಾರಿ 38 ವರ್ಷ ಹಾಗೂ ಬೆಳಗಾವಿ ವಿಭಾಗದ ಬೆಳಗಾವಿ-2ನೇ ಘಟಕದ ಎಸ್.ಎಸ್.ಭಾವಿಕಟ್ಟಿ 29ವರ್ಷಗಳ ಅವಧಿಗೆ ಯಾವುದೇ ಅಪಘಾತವಿಲ್ಲದೆ ಬಸ್ ಚಾಲನೆ ಮಾಡುತ್ತಿದ್ದಾರೆ. ಇವರಿಗೆ ಏ.18ರಂದು ದೆಹಲಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ (ಂSಖಖಿU)ದ ವತಿಯಿಂದ ” ಹಿರೋಸ್ ಆನ್ ದಿ ರೋಡ್ ” ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಇಬ್ಬರೂ ಚಾಲಕರಿಗೆ ವಾಕರಸಾ ಸಂಸ್ಥೆಯ ವತಿಯಿಂದ ಗೌರವಿಸಿ ತಲಾ 5 ಸಾವಿರ ರೂ.ನಗದು ಪುರಸ್ಕಾರ ನೀಡಲಾಯಿತು.
ಆರೋಗ್ಯಕರ ಜೀವನಶೈಲಿ ಹಾಗೂ ಉತ್ತಮ ಕಾರ್ಯತತ್ಪರತೆಯಿಂದ ಸುಧೀರ್ಘ ಅವಧಿಗೆ ಯಾವುದೇ ಅಪರಾಧ, ಅಪಘಾತ ವಿಲ್ಲದೆ ಸಾರ್ವಜನಿಕ ಬಸ್ ಚಾಲನೆ ಮಾಡಲು ಸಾಧ್ಯ ಎಂಬುದನ್ನು ಈ ಚಾಲಕರು ನಿರೂಪಿಸಿದ್ದಾರೆ ಎಂದು ಶ್ಲಾಘಿಸಿದರು. ಸುರಕ್ಷತೆಯ ಬಗ್ಗೆ ನಂಬಿಕೆ ಇಟ್ಟು ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.
ಹಿರಿಯ ಅಧಿಕಾರಿಗಳಾದ ರಾಜೇಶ ಹುದ್ದಾರ, ಪ್ರಕಾಶ ಕಬಾಡಿ, ಜಗದೀಶ್, ಎಚ್. ರಾಮನಗೌಡರ, ಶಶಿಧರ ಕುಂಬಾರ, ಎಂ.ಆರ್. ಮುಂಜಿ, ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.