ಅಭಿನಂದನಾ ಗ್ರಂಥ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ:ಶಿವಾನಂದ ಪಾಟೀಲ

ಕಲಬುರಗಿ,ಆ.6: ಅಭಿನಂದನಾ ಗ್ರಂಥ ಎನ್ನುವುದು ಕೇವಲ ಒಂದು ಪುಸ್ತಕವಲ್ಲ.ಗ್ರಂಥದಲ್ಲಿ ಚಿತ್ರೀತವಾಗಿರುವ ವ್ಯಕ್ತಿಯನ್ನು ಮುಟ್ಟುವ ಜತೆಗೆ ಅವನ ಸಮಗ್ರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವ ಹೊತ್ತಗೆಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು.

ಅವರು ಭಾನುವಾರ ಭಂಕೂರ ಗ್ರಾಮದ ಗಾಯಕ್‍ವಾಡ ಫಂಕ್ಷನ್ ಹಾಲ್‍ನಲ್ಲಿ ಆಯೋಜಿಸಲಾದ ನಿವೃತ್ತ ಪ್ರಾಂಶುಪಾಲ ಪಿ.ಎಸ್. ಕೊಕಟನೂರ್ ಅವರ ಷಷ್ಠಿ ಪೂರ್ತಿ ಹಾಗೂ ಅಂತರಾಳ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕೋಕಟನೂರ್ ಅವರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಂಡವರು.ರಾಜಕೀಯ, ಸಾಮಾಜಿಕ,ಧಾರ್ಮಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ.ಅವರ ಒಂದು ವ್ಯಕ್ತಿತ್ವ ಅಂತರಾಳ ಗ್ರಂಥದಲ್ಲಿ ಕಾಣಬಹುದಾಗಿದೆ.ನಿವೃತ್ತ ಪ್ರಾಂಶುಪಾಲರಾಗಿರುವ ಇವರು ವಿದ್ಯಾರ್ಥಿಗಳೊಂದಿಗೆ, ರಾಜಕೀಯ ಮುಖಂಡರೊಂದಿಗೆ, ಧಾರ್ಮಿಕ ಶ್ರೀಗಳೋಂದಿಗೆ,ಸಾಹಿಗಳ ಜತೆ ಉತ್ತಮ ಒಡನಾಟವನ್ನು ಹೊಂದಿದವರು.ಈ ಮುಂದೆಯೂ ಸಾಮಾಜಿಕವಾಗಿ ಇನ್ನೂ ಅವರಿಂದ ಅನೇಕ ಸಮಾಜಮುಖಿ ಕೆಲಸಗಳು ನಡೆಯಲಿ ಆಶಿಸುವೆ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಮಾತನಾಡಿ, ಸರಳ ಹಾಗೂ ಮೃದು ಸ್ವಭಾವದ ವ್ಯಕ್ತಿತ್ವ ಕೋಕಟನೂರ್ ಅವರಲ್ಲಿದೆ.ಅವರು ಭಂಕೂರ ಕಸಾಪ ಘಟಕದ ಅಧ್ಯಕ್ಷರಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.ಅಲ್ಲದೇ ಕನ್ನಡ ಕಟ್ಟುವ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡು ಶೈಕ್ಷಣಿಕ ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಗೆ ಇನ್ನೂ ನಿವೃತ್ತರಾಗದಿರಲಿ ಎಂದು ಹಾರೈಸುವೆ ಎಂದರು.

ಶರಣ ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕೊಕಟನೂರ್ ಅವರು ಎಲ್ಲಾ ಕ್ಷೇತ್ರದಲ್ಲಿ ಬೆಳೆದು ತೋರಿಸಿದ್ದಾರೆ. ಗ್ರಾಮೀಣ ಭಾಗದ ಶಾಲೆಯಲ್ಲಿ ಕಲಿತು, ಬಡತನದಲ್ಲಿ ಬೆಂದು ಎತ್ತರಕ್ಕೆ ಬೆಳೆದು ಬಂದರೂ ಅವರಲ್ಲಿ ಯಾವುದೇ ಅಹಂ ಕಾಣಸಿಗದು.ಅವರ ಸರಳ ವ್ಯಕ್ತಿತ್ವವೇ ಅವರಿಗೆ ಮಾದರಿ ವ್ಯಕ್ತಿಯನ್ನಾಗಿಸಿದೆ ಎಂದು ಹೇಳಿದರು. ಯುವ ಸಾಹಿತಿ ಡಾ.ಮಲ್ಲಿನಾಥ ತಳವಾರ ಪುಸ್ತಕ ಪರಿಚಯ ನೀಡಿದರು.

ಪದ್ಮಣಪ್ಪ ಮುತ್ಯಾ ಸಾನಿಧ್ಯ ವಹಿಸಿದ್ದರು.ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ,ಎ.ಹೆಚ್.ನಾಗೇಶ,ಸಂತೋಷ ನವಲಗುಂದ,ಚನ್ನವೀರಪ್ಪಗೌಡ ಪಾಟೀಲ,ಮಲ್ಲಿಕಾರ್ಜುನ ಪೂಜಾರಿ,ಎಂ.ಬಿ.ನಿಂಗಪ್ಪ,ಎಚ್.ಎಸ್.ಮಟ್ಟಿ,ಶಾಂತಪ್ಪ ಬಂದರವಾಡ,ಎಸ್.ಎನ್.ಹೊನಗುಂಟಿಕರ್,ರಾಜೆ ಶಿವಶರಣಪ್ಪ,ಡಿ.ಡಿ.ಓಣಿ,ಸುರೇಶ ಮೆಂಗನ್,ಗುರುನಾಥ ಪೂಜಾರಿ,ಕುಪೇಂದ್ರ ಬರಗಾಲಿ,ಈರಣ್ಣ ಕೆಂಭಾವಿ,ಅಮೃತ ಮಾನಕರ್,ಶರಣಬಸಪ್ಪ ಧನ್ನಾ, ಮುಜಾಹಿದ್ ಹುಸೇನ್, ಜಾಕೀರ, ಮರಲಿಂಗ ಯಾದಗಿರಿ ಅನೀಲ ಮೈನಾಳಕರ್, ಶಶಿಕಾಂತ ಮಡಿವಾಳ, ಹಣಮಂತ ಕುಂಬಾರ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.