
ಕಲಬುರಗಿ,ಮಾ.14 : ಯಾದಗಿರಿ ಜಿಲ್ಲೆಯ ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಇದೇ ಮಾರ್ಚ್ 24ರಿಂದ 31ರವರೆಗೆ ಅತಿ ರುದ್ರಯಾಗ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುಸ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಅತಿ ರುದ್ರಯಾಗದ ಭಾಗವಾಗಿ 108 ಗೋಮಂಗಲ ಪೂಜೆ, ಅಷ್ಟ ಮಂಗಲ ಲಕ್ಷ್ಮಿ ಕುಬೇರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮಾರ್ಚ್ 24ರಂದು ಮಧ್ಯಾಹ್ನ 2ಕ್ಕೆ 108 ಗೋಮಂಗಲ ಪೂಜೆ ನಡೆಯಲಿದೆ. ಗೋವುಗಳನ್ನು ಭೀಮಾ ನದಿಗೆ ಮೆರವಣಿಗೆ ಕರೆದೊಯ್ದು ಗಂಗಾ ಸ್ನಾನ ಮಾಡಿಸಿ, ಮುತ್ತೈದೆಯರ ರೀತಿಯಲ್ಲಿ ಸಿಂಗರಿಸಿ ಶ್ರೀಮಠಕ್ಕೆ ಕರೆ ತರಲಾಗುವುದು. ಬಳಿಕ 108 ದಂಪತಿಗಳು ಗೋಪೂಜೆ ನೆರವೇರಿಸಿ, ನಂತರ ರಾತ್ರಿ 8ಕ್ಕೆ ವಿಶ್ವಾರಾಧ್ಯರ ತೊಟ್ಟಿಲುತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಾರ್ಚ್ 25ರಂದು 108 ಕುಂಡಗಳಲ್ಲಿ 108 ದಂಪತಿಗಳಿಂದ ಏಕಕಾಲಕ್ಕೆ ಅತಿ ರುದ್ರಯಾಗ ನೆರವೇರಲಿದೆ. ಆ ನಂತರ ಸಂಜೆ 6ಕ್ಕೆ ಅಷ್ಟ ಮಂಗಲ ಲಕ್ಷ್ಮಿ ಕುಬೇರ ಪೂಜೆಯನ್ನು 108 ದಂಪತಿಗಳು ನಡೆಸಿಕೊಡಲಿದ್ದಾರೆ ಎಂದರು.
ಮಾರ್ಚ್ 25ರಿಂದ 31ರವರೆಗೆ ನಿರಂತರವಾಗಿ ಅತಿ ರುದ್ರಯಾಗದ ಭಾಗವಾಗಿ 108 ಗೋ ಮಂಗಲ ಪೂಜೆ, ಅಷ್ಟ ಮಂಗಲ ಲಕ್ಷ್ಮಿ ಕುಬೇರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್ 31ರಂದು 41 ಅಡಿ ಎತ್ತರದ ಮಂದಿರ ಹಾಗೂ ಶ್ರೀ ವಿಶ್ವಾರಾಧ್ಯರ ಮೂರ್ತಿ ಪ್ರತಿಪ್ಠಾಪನೆ ಮತ್ತು ಲೋಕಾರ್ಪಣೆ ಹಾಗೂ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ಹಂಚಿಕೊಂಡರು.
ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ ಮತ್ತಿಮೂಡ, ಡಾ.ಅಜಯಸಿಂಗ್, ಮಾಜಿ ಶಾಸಕರಾದ ಡಾ.ಶರಣಪ್ರಕಾಶ್ ಪಾಟೀಲ್, ಗುರು ಪಾಟೀಲ್ ಶಿರವಾಳ್, ಶ್ರೀಮಠದ ವಕ್ತಾರರಾದ ಡಾ.ಸುಭಾಶ್ಚಂದ್ರ ಕೌಲಗಿ, ಸಿದ್ದಣ್ಣಗೌಡ ಪಾಟೀಲ್ ಮಳಗಿ ಇದ್ದರು.
ಸಕಲ ಸಿದ್ಧತೆ
ಮಾರ್ಚ್ 24ರಿಂದ 31ರವರೆಗೆ ನಡಯಲಿರುವ ಅತಿ ರುದ್ರಯಾಗದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ, ವಸತಿ ವ್ಯವಸ್ಥೆ, ಸ್ನಾನ ಗೃಹಗಳು ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶ್ರೀ ಗಂಗಾಧರ ಮಹಾಸ್ವಾಮಿಗಳು ತಿಳಿಸಿದರು.
ವಿಶೇಷ ಬಸ್ ವ್ಯವಸ್ಥೆ
ಅಬ್ಬೆ ತುಮಕೂರು ಮಠದಲ್ಲಿ ಮಾರ್ಚ್ 24ರಿಂದ ನಡೆಯಲಿರುವ ಅತಿ ರುದ್ರಯಾಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರ ಹಿತದೃಷ್ಟಿಯಿಂದ ಕಲ್ಯಾಣ ಕರ್ನಾಟಕ ರಸ್ತ ಸಾರಿಗೆ ಸಂಸ್ಥೆ ವತಿಯಿಂದ ಅಗತ್ಯ ಪ್ರಮಾಣದಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್ ತಿಳಿಸಿದರು.