ಅಬ್ಬಾ ಏನಿದು ಬಿಸಿಲು…

ಕಲಬುರಗಿ,ಮೇ.20-“ಅಬ್ಬಾ ಏನಿದು ಬಿಸಿಲು…” ಇಂತಹದೊಂದು ಉದ್ಘಾರ ಕಲಬುರಗಿಯಲ್ಲೀಗ ಕೇಳಿ ಬರುತ್ತಿದೆ. ಕಳೆದ ಒಂದು ವಾರದಿಂದ ಹೆಚ್ಚಾಗಿರುವ ಬಿಸಿಲ ತಾಪಕ್ಕೆ ಇಲ್ಲಿನ ಜನ ಬಸವಳಿದು ಹೋಗಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ಅನುಸಾರ ಶುಕ್ರವಾರ ಜಿಲ್ಲೆಯಲ್ಲಿ 41.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬಿರು ಬಿಸಿಲಿನಿಂದ ಜನ ಕಂಗೆಟ್ಟು ಹೋಗಿದ್ದಾರೆ.
ಸೂರ್ಯೋದಯದೊಂದಿಗೆ ಆರಂಭವಾಗುವ ಬಿಸಿಲು ಹೊತ್ತು ಏರುತ್ತ ಹೋದಂತೆ ಹೆಚ್ಚಾಗುತ್ತ ಹೋಗಿ ಭೂಮಿಯನ್ನು ಕಾದ ಕೆಂಡವಾಗಿಸುತ್ತಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲ ತಾಪ ಹೇಳತೀರದಾಗಿದೆ. ಈ ಸಮಯದಲ್ಲಿ ಹೊರಗಡೆ ಓಡಾಡುವುದೇ ದುಸ್ತರವಾದಂತಾಗಿದ್ದು, ಈ ಸಮಯದಲ್ಲಿ ಬಿಸಿಲ ತಾಪ ಹೆಚ್ಚಾಗಿರುವುದರಿಂದ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಲ್ಲಾಡಳಿತ ಈಗಾಗಲೆ ಜನರಿಗೆ ಸೂಚನೆ ನೀಡಿದೆ.
ಹಗಲು ಭೂಮಿ ಕಾದ ಕೆಂಡವಾಗುತ್ತಿರುವುದರಿಂದ ರಾತ್ರಿ ವೇಳೆ ಧಗೆ ಹೆಚ್ಚಾಗಿ ಜನರ ನಿದ್ದೆಗೆಡಿಸುತ್ತಿದೆ. ಫ್ಯಾನ್, ಏರ್ ಕೂಲರ್ ಬಳಸಿದರೂ ಬಿಸಿಲತಾಪದಿಂದ ತಣಿಸಿಕೊಳ್ಳದಂತಾಗಿದೆ. ಬಿಸಿಲ ತಾಪ ಹೆಚ್ಚಾಗಿರುವುದರಿಂದ ವೃದ್ಧರು, ಮಕ್ಕಳು ಮತ್ತು ರೋಗಿಗಳು ತೀವ್ರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಹೇಗೆ ?ಎಂಬ ಆತಂಕ ಇದೀಗ ಜನರನ್ನು ಕಾಡುತ್ತಲಿದೆ. ವರ್ಷದಿಂದ ವರ್ಷಕ್ಕೆ ಬಿಸಿಲು ಹೆಚ್ಚಾಗುತ್ತಲೇ ನಡೆದಿದೆ. ನಗರ ಪ್ರದೇಶಗಳಲ್ಲಿ ಜನ ಮರಗಳನ್ನು ಕಡೆದು ಮನೆಗಳನ್ನು ಕಟ್ಟುತ್ತಿರುವುದು, ಕಲಬುರಗಿ ಕಾಂಕ್ರಿಟ್ ಕಾಡಾಗುತ್ತಿರುವುದು ಬಿಸಿಲು ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು, ಹಿರಿಯ ಜೀವಿಗಳು ಅಲವತ್ತುಕೊಳ್ಳುತ್ತಿದ್ದಾರೆ.
ಬೆಂಕಿಯಂತಹ ಬಿಸಿಲಿದ್ದರೂ ಸಹ ಇಲ್ಲಿನ ಜನ ಕೊಡೆ ಬಳಸುವುದಿಲ್ಲ. ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಅಲ್ಲೊಬ್ಬರು, ಇಲ್ಲೊಬ್ಬರು ಕೊಡೆ ಹಿಡಿದು ಓಡಾಡುವುದು ಬಿಟ್ಟರೆ ಬಹುತೇಕ ಜನ ಹಾಗೇ ಓಡಾಡುವುದು ಸಾಮಾನ್ಯವಾಗಿದೆ. ಬಿಸಿಲು ಹೆಚ್ಚಾಗಿರುವುದರಿಂದ ಮುಂಜಾಗ್ರತೆ ವಹಿಸದೆ ಓಡಾಡುವುದು ಸರಿಯಲ್ಲ, ಸನ್‍ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕಾಗಿ ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಡುವುದು ಬೇಡ. ಅಗತ್ಯವಾದ ಮುಂಜಾಗ್ರತೆ ವಹಿಸಿ ಓಡಾಡುವುದು ಸೂಕ್ತ. ಆಗಾಗ ನೀರು ಕುಡಿಯಿರಿ, ಓಆರ್‍ಎಸ್ ಬಳಸಿ, ಲಿಂಬು ಶರಬತ್, ಎಳೆ ನೀರು ಕುಡಿಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.