ಅಬಕಾರಿ ಹಗರಣ ಇಡಿಯಿಂದ ದೆಹಲಿ ಸಿಎಂ ಕೇಜ್ರಿವಾಲ್ ಬಂಧನ

ನವದೆಹಲಿ: ದೆಹಲಿ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂ‌ದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ.
ದೆಹಲಿ ಮದ್ಯ ನೀತಿ ಹಗರಣ ಕುರಿತಂತೆ ಕೇಜ್ರಿವಾಲ್ ಅವರಿಗೆ‌ ಇಡಿ ಅಧಿಕಾರಿಗಳು 9 ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೆ ಕೇಜ್ರಿವಾಲ್ ಇದು ರಾಜಕೀಯ ಪ್ರೇರಿತ ನೋಟಿಸ್ ಎಂದು ಆರೋಪಿಸಿ ವಿಚಾರಣೆಗೆ ಗೈರು ಹಾಜರಾಗಿದ್ದರು.
ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.
ಇದರ ಬೆನ್ನಲ್ಲೇ ಇ.ಡಿ ಅಧಿಕಾರಿಗಳ ತಂಡವು ಕೇಜ್ರಿವಾಲ್‌ ಅವರ ನಿವಾಸಕ್ಕೆ ತೆರಳಿ ಶೋಧ ಕಾರ್ಯ ನಡೆಸಿ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಂಡು ನಿವಾಸದಲ್ಲಿ ವಿಚಾರಣೆಗೆ ಗುರಿಪಡಿಸಿತ್ತು.

ಇಡಿ ಅಧಿಕಾರಿಗಳು ದೊಡ್ಡ ಮಟ್ಟದ ಪೊಲೀಸ್​ ಭದ್ರತೆಯೊಂದಿಗೆ ಸಿಎಂ ನಿವಾಸಕ್ಕೆ ತೆರಳಿ ಸತತವಾಗಿ ಎರಡು ಗಂಟೆಗಳ ಕಾಲ ಪರಿಶೋಧ ನಡೆಸಿದ್ದರು. ಇದೇ ವೇಳೆ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಎಂ ನಿವಾಸಕ್ಕೆ ತೆರಳಿದ್ದ 12ಕ್ಕೂ ಅಧಿಕ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕೇಜ್ರಿವಾಲ್ ಅವರ ಮನೆಗೆ ಹೋಗುವ ರಸ್ತೆಗಳನ್ನು ದೆಹಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಪ್ರವೇಶಿಸಲು ಎಎಪಿ ನಾಯಕರಿಗೆ ಅವಕಾಶ ನೀಡುತ್ತಿಲ್ಲ.

ಕೇಜ್ರಿವಾಲ್ ಅವರ ಮನೆಗೆ ಅಧಿಕಾರಿಗಳು ತೆರಳುತ್ತಿದ್ದಂತೆ ಆಪ್​ ಕಾರ್ಯಕರ್ತರು ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ನಾಯಕರು ಮನೆಯ ಸುತ್ತ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಹೆಚ್ಚಿನ ವಿಚಾರಣೆಗಾಗಿ ಕೇಜ್ರಿವಾಲ್ ಅವರನ್ನು ಇಡಿ ವಶಕ್ಕೆ ಪಡೆದಿದ್ದಾರೆ.