ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಫೋನ್ ಪತ್ತೆ

ನವದೆಹ,ಮಾ.೨೫-ದೆಹಲಿ ಸರ್ಕಾರದ ಅಬಕಾರಿ ನೀತಿ ರೂಪಿಸುವ ಸಮಯದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಳಸಿದ್ದ ಪೋನ್ ಪತ್ತೆಯಾಗಿದ್ದು ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷಿ ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅಬಕಾರಿ ನೀತಿ ಅನುಷ್ಠಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಹಾಗು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ೫೫ ವರ್ಷದ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಅವರ ನಿವಾಸದಲ್ಲಿ ಗುರುವಾರ ಬಂಧಿಸಿತ್ತು.
ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿ ವಿಚಾರಣೆ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಅನಿಷ್ಠಾನದ ಸಮಯದಲ್ಲಿ ಬಳಸಿದ್ದ ಪೋನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯಾರೊಂದಿಗೆ ಮಾತನಾಡಿದ್ದರು. ಏನೆಲ್ಲಾ ವಿಷಯಗಳು ಚರ್ಚೆ ಆಗಿತ್ತು ಎನ್ನುವುದನ್ನು ಪತ್ತೆಹಚ್ಚಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾರೆ.
ವರದಿಗಳ ಪ್ರಕಾರ, ಈ ಫೋನ್ ಕುರಿತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಕೇಳಿದಾಗ, ಪ್ರಸ್ತುತ ಫೋನ್ ಎಲ್ಲಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಕೇಜ್ರಿವಾಲ್ ಅವರನ್ನು ತನಿಖಾ ಅಧಿಕಾರಿಗಳು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಜೈಲಿನಲ್ಲಿರುವ ಸಮೀರ್ ಮಹೇಂದ್ರು ಎಂಬಾತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ನಾಳೆ ಮನೀಷ್ ಸಿಸೋಡಿಯಾ ಅವರ ಕಾರ್ಯದರ್ಶಿಯಾಗಿದ್ದ ಸಿ ಅರವಿಂದ್ ಅವರ ಮುಂದೆ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಬಹುದು ಎಂದು ಮೂಲಗಳು ತಿಳಿಸಿವೆ.

ಸಿಎಂ ನಿರ್ದೇಶನ
ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಸಚಿವೆ ಅತಿಶಿ ಚರ್ಚೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ತಿಂಗಳುಗಳಿಗೆ ಮುಂಚಿತವಾಗಿ ನೀರು ಪೂರೈಕೆಯನ್ನು ಬಲಪಡಿಸಲು ಕೊರತೆಯಿರುವ ಪ್ರದೇಶಗಳಲ್ಲಿ ಸಾಕಷ್ಟು ನೀರಿನ ಟ್ಯಾಂಕರ್‍ಗಳನ್ನು ನಿಯೋಜಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುವಂತೆ ಕೇಜ್ರಿವಾಲ್ ಸೂಚಿಸಿದ್ದಾರೆ.
ಅಗತ್ಯವಿದ್ದರೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಸಹಾಯವನ್ನು ಪಡೆಯಲು ಅವರು ಸಲಹೆ ನೀಡಿದರು ಮತ್ತು ಅವರು ಎಲ್ಲಾ ಸಹಕಾರ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ಇಂಡಿಯಾ ಮೈತ್ರಿಕೂಟದಿಂದ ರ್‍ಯಾಲಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಇಂಡಿಯಾ ಮೈತ್ರಿಕೂಟ ಮಾರ್ಚ್ ೩೧ ರಂದು ಮೆಗಾ ರ್‍ಯಾಲಿ ನಡೆಸಲು ನಿರ್ಧರಿಸಿದೆ.
ದೆಹಲಿ ಅಬಕಾರಿ ನೀತಿ ಅನಿಷ್ಠಾನಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ ೨೮ ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಲಾಗಿದೆ.