ಅಬಕಾರಿ ದಾಳಿ 64,892 ರೂ.ಗಳ ಮೌಲ್ಯದ ಮದ್ಯ ಹಾಗೂ ಬಿಯರ್ ವಶ

ಕಲಬುರಗಿ,ಮಾ.30:ಅಬಕಾರಿ ನಿರೀಕ್ಷಕರಾದ ಸುಭಾಸ ಎಂ. ಕೋಟಿ ಇವರ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ನರೇಂದ್ರಕುಮಾರ ಹೊಸಮನಿ, ಅಣ್ಣಪ್ಪ.ಕೆ ನವಲೆ ಹಾಗೂ ಸಿಬ್ಬಂದಿಗಳೊಂದಿಗೆ ಮಾರ್ಚ್ 28 ರಂದು ಸಂಜೆ 7 ಗಂಟೆಗೆ ಕಲಬುರಗಿ ತಾಲೂಕಿನ ಶರಣಶಿರಸಗಿ ಗ್ರಾಮದಿಂದ ಅಫಜಲಪೂರ ಕಡೆ ಹೋಗುವ ರಸ್ತೆಯ ಬಲಭಾಗದಲ್ಲಿ ಬರುವ ದಾಬಾದ ಪತ್ರಾಸ್ ಶೆಡ್ ಮೇಲೆ ಅಬಕಾರಿ ದಾಳಿ ನಡೆಸಿ 86.640 ಲೀ. ಮದ್ಯ ಹಾಗೂ 31.200 ಲೀ. ಬಿಯರ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಲಬುರಗಿ ವಲಯ ನಂ.2ರ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲ್ಕಂಡ ಮದ್ಯ ಹಾಗೂ ಬೀಯರ್ ಮೌಲ್ಯವು ಅಂದಾಜು 64,892 ರೂ ಇದ್ದು, ಅಬಕಾರಿ ಉಪನಿರೀಕ್ಷಕರ-2 ನರೇಂದ್ರಕುಮಾರ ಹೊಸಮನಿ ಅವರು ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ಈ ದಾಳಿ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಾದ ಆಸೀಫ್ ಇಕ್ಬಾಲ್, ಚನ್ನಪ್ಪ ಸಾಹು, ಮಹ್ಮದ್ ರಿಜ್ವಾನ್ ಹಾಗೂ ಸಂತೋಷ ಜಮಾದಾರ ಉಪಸ್ಥಿತರಿದ್ದರು.
ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ ಇವರ ಆದೇಶದಂತೆ ಹಾಗೂ ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾ&ತ) ರವರ ನಿರ್ದೇಶನದ ಮೇರೆಗೆ ಮತ್ತು ಕಲಬುರಗಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶದನ್ವಯ ಈ ದಾಳಿಯನ್ನು ನಡೆಸಲಾಗಿದೆ.