
ಮಧುಗಿರಿ, ಏ. ೧- ಅಕ್ರಮ ಮದ್ಯ ದಾಸ್ತಾನು ಮಾಡಿದ್ದ ಮನೆಯ ಮೇಲೆ ದಾಳಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು ೧ ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಮಲ್ಲನಾಯಕನಹಳ್ಳಿ ಗ್ರಾಮದ ರವಿಕುಮಾರ್ ಎಂಬುವರು ಚುನಾವಣೆ ನಿಮಿತ್ತ ಮನೆಯಲ್ಲಿಯೇ ಮದ್ಯವನ್ನು ಶೇಖರಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಅಬಕಾರಿ ನಿರೀಕ್ಷಕ ರಾಮಮೂರ್ತಿ ನೇತೃತ್ವದ ತಂಡ ರವಿಕುಮಾರ್ ಎಂಬುವರ ಮನೆಯ ಮೇಲೆ ದಾಳಿ ಮಾಡಿ ೫೮ ಬಾಕ್ಸ್ ಗಳ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದೆ.
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾರು ಸಹ ಅಕ್ರಮವಾಗಿ ಮದ್ಯ ದಾಸ್ತಾನು ಮಾಡುವುದಾಗಲಿ ಅಥವಾ ಮದ್ಯ ಹಂಚುವುದಾಗಲಿ ಮಾಡಬಾರದು. ಒಂದು ವೇಳೆ ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ನಿರೀಕ್ಷಕ ರಾಮಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ದಾಳಿಯಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಮನು, ಪೇದೆಗಳಾದ ಶರಣಪ್ಪಸ ರಮೇಶ್ ಮತ್ತಿತರರು ಭಾಗವಹಿಸಿದ್ದರು.