ಅಬಕಾರಿ ಇಲಾಖೆಯ ನೌಕರರಿಗೆ ವಾಕ್ಸಿನ್

ಚಿತ್ರದುರ್ಗ.ಮೇ.೧; ಸರ್ಕಾರದ ಮುಂಚೂಣಿ ಕೊರೊನಾ ವಾರಿಯರ್‍ಗಳ ವಿಭಾಗದಲ್ಲಿ ಅಬಕಾರಿ ಇಲಾಖೆ ನೌಕರರು ಇದ್ದು, ಸಾರ್ವಜನಿಕರ ಸಂಪರ್ಕ ಜಾಸ್ತಿ ಇರುವುದರಿಂದ ಇಲಾಖೆಯ ಎಲ್ಲಾ ನೌಕರರು ಕಡ್ಡಾಯವಾಗಿ ಕೋವಿಡ್-19 ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಎಲ್. ಫಾಲಾಕ್ಷ ಹೇಳಿದರು.
ನಗರದ ಜಿಲ್ಲಾ ಆಸತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಬಕಾರಿ ಇಲಾಖೆ ವತಿಯಿಂದ ಅಬಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಕೋವಿಡ್-19 ಲಸಿಕಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರೆಗೆ 2.25 ಲಕ್ಷ ಕೋವಿಡ್ ಲಸಿಕೆ ನೀಡಲಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಲಸಿಕೆಯಿಂದ ಉಂಟಾಗಿಲ್ಲ ಎಂದು ತಿಳಿಸಿದರು.
ಅಬಕಾರಿ ಉಪ ಆಯುಕ್ತ ಆರ್. ನಾಗಶಯನ ಮಾತನಾಡಿ, ಕೋವಿಡ್-19 ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿಗಳು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವೆಲ್ಲರೂ ಅವರ ಜೊತೆ ಸಹಕರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಅಬಕಾರಿ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ, ಆರೋಗ್ಯ ನಿರೀಕ್ಷಕರಾದ ವಿ.ಗಂಗಾಧರ್, ಪರ್ವಿನ್ ಸೇರಿದಂತೆ ಅಬಕಾರಿ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.