
ಪ್ರಿಯಾಂಕ್ ಆರೋಪ
ಬೆಂಗಳೂರು,ಫೆ.೨೮-ರಾಜ್ಯದ ಅಬಕಾರಿ ಇಲಾಖೆಯಲ್ಲಿ ೨೦೦ ಕೋಟಿ ರೂ. ಅವ್ಯವಹಾರ ನಡೆದಿದ್ದು, ಇದರಲ್ಲಿ ೮೦ ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ.
ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕಖರ್ಗೆ ಹಾಗೂ ವಕ್ತಾರ ರಮೇಶ್‌ಬಾಬು, ಅಬಕಾರಿ ಇಲಾಖೆಯಲ್ಲಿ ಕಾಕಂಬಿ ರಫ್ತು ಹಾಗೂ ಮೊಲಾಸಿಸ್‌ಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದ್ದು, ಅನರ್ಹ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ ನೀಡಲಾಗಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ೮೦ ಕೋಟಿಗೂ ಹೆಚ್ಚು ಲಂಚ ಪಡೆಯಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಬಕಾರಿ ಸಚಿವ ಗೋಪಾಳಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆಡಿಯೋವೊಂದನ್ನು ಬಿಡುಗಡೆ ಮಾಡಿದರು.
ಈ ಆಡಿಯೋದಲ್ಲಿ ಕೆಎನ್ ರಿಸೋಸ್ ಸಂಸ್ಥೆಗೆ ಕೊಡಿಸಲು ಶಿವರಾಜ್ ಮತ್ತು ಸುರೇಶ್ ಎಂಬುವರು ಮಾತನಾಡಿರುವ ಸಂಭಾಷಣೆಯ ಆಡಿಯೋ ಇದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರೇ ಅಬಕಾರಿ ಸಚಿವರು, ಆಯುಕ್ತರ ಜತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಕಾಕಂಬಿ ನಮಗೇ ಸಾಕಾಗುತ್ತಿಲ್ಲ ಎಂದು ಪ್ರತಿಭಟನೆ ನಡೆದಿದ್ದರೂ ಸರ್ಕಾರ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕಾಕಂಬಿ ರಫ್ತಿಗೆ ಮುಂಬೈ ಮೂಲದ ಕೆಎನ್ ರಿಸೋಸ್ ಎಂಬ ಕಂಪನಿಗೆ ಅನುಮತಿ ನೀಡಿದೆ. ಈ ಕಂಪನಿ ೩ ವರ್ಷದಿಂದ ಜಿಎಸ್‌ಟಿ ಕಟ್ಟಿಲ್ಲ. ಯಾವುದೇ ದಾಖಲೆಗಳಿಲ್ಲ. ಆದರೂ ಅನುಮತಿ ನೀಡಲಾಗಿದೆ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾರವಾರ ಬಂದರು ಇದ್ದರೂ ೨ ಲಕ್ಷ ಮೆಟ್ರಿಕ್ ಟನ್ ಕಾಕಂಬಿಯನ್ನು ಗೋವಾದಿಂದ ರಫ್ತು ಮಾಡಲಾಗುತ್ತಿದೆ.
ರಾಜ್ಯದಿಂದ ಬಂದರಿನಿಂದಲೇ ರಫ್ತು ಮಾಡಿದ್ದರೆ ಶೇ. ೧೬ ಟ್ಯಾಕ್ಸ್ ಬರುತ್ತಿತ್ತು. ಈ ಕಾಕಂಬಿಯನ್ನು ಸ್ಥಳೀಯ ಡಿಸ್ಟಿಲರಿಗಳಿಗೆ ಕೊಟ್ಟಿದ್ದರೆ ೬೬ ಕೋಟಿ ರೂ. ತೆರಿಗೆ ಬರುತ್ತಿತ್ತು. ರಾಜ್ಯದ ಬೊಕ್ಕಸಕ್ಕೆ ಆದಾಯ ನಷ್ಟವಾಗಿದೆ ಎಂದು ಹೇಳಿದರು.