ಅಫಜಲಪೂರ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಪುನರಾರಂಭ

ಕಲಬುರಗಿ.ನ.9:ರಾಜ್ಯ ಸರಕಾರದ ಮಾರ್ಗಸೂಚಿಯಂತೆ ರಾಜ್ಯಾದಂತಹ ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಸೋಮವಾರದಂದು ಅಫಜಲಪೂರ ತಾಲ್ಲೂಕಿನ 260 ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಶಾಲಾಪೂರ್ವ ಶಿಕ್ಷಣಕ್ಕೆ ಬರಮಾಡಿಕೊಳ್ಳಲಾಯಿತು.
ಅಂಗನವಾಡಿ ಪ್ರಾರಂಭದ ಮುನ್ನಾ ದಿನವಾದ ರವಿವಾರದಂದು ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಪ್ರತಿ ಅಂಗನವಾಡಿ ಕೇಂದ್ರಕ್ಕೆ ತೆರಳಿ ಸ್ಯಾನಿಟೈಸರ್ ಮಾಡಿಸಿ, ಮಕ್ಕಳ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರೂ ಸಹ ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛಗೊಳಿಸಿ ನವವಧುವಿನಂತೆ ಅಂಗನವಾಡಿ ಕೇಂದ್ರಗಳನ್ನು ಸಿಂಗರಿಸಿ ಮಕ್ಕಳ ಆಗಮನಕ್ಕಾಗಿ ಸಂಭ್ರಮದ ವಾತಾವರಣವನ್ನು ನಿರ್ಮಿಸಿದರು.
ಅಫಜಲಪೂರ ತಾಲ್ಲೂಕಿನ ರೇವೂರ(ಬಿ) ತಾಂಡಾ ಗ್ರಾಮದಲ್ಲಿ ಸಾಂಕೇತಿಕವಾಗಿ ಮಾಜಿ ಜಿಲ್ಲಾ ಪಂಚಾಯತಿಯ ಸದಸ್ಯರೂ ಹಾಗೂ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಅರುಣಕುಮಾರ ಪಾಟೀಲ ಅವರು ಮಕ್ಕಳಿಗೆ ಗುಲಾಬಿ ಹೂ ಕೊಟ್ಟು, ಸಿಹಿ ತಿನಿಸಿ ಮಕ್ಕಳನ್ನು ಪ್ರೀತಿಯಿಂದ ನೀಡಿ ಅಂಗನವಾಡಿ ಕೇಂದ್ರಕ್ಕೆ ಬರ ಮಾಡಿಕೊಂಡರು.
ನಂತರ ಅವರು ಮಾತನಾಡಿ, ಅಂಗನವಾಡಿ ಕೇಂದ್ರಗಳು ಇದೀಗ ಪುನರಾರಂಭವಾಗಿದ್ದು, ಪಾಲಕರು ಜವಾಬ್ದಾರಿಯಿಂದ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಮ್ಮ ಪಾಟೀಲ ಮಾತನಾಡಿ ದಾಖಲಾದ ಎಲ್ಲಾ ಮಕ್ಕಳನ್ನು ಒಂದೇ ದಿನ ಕಳಿಸದೇ ದಿನಕ್ಕೆ 5 ಮಕ್ಕಳಂತೆ ಅಂಗನವಾಡಿ ಕೇಂದ್ರಕ್ಕೆ ಕಳಿಸಬೇಕು. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಗ್ರಾಮ ಪಂಚಾಯತಿಯ ಅದ್ಯಕ್ಷ, ಉಪಾದ್ಯಕ್ಷರು, ಗ್ರಾಮದ ಮುಖಂಡರು, ಇಲಾಖೆಯ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.