ಅಫಜಲಪುರ ಪುರಸಭೆ ನೂತನ ಮುಖ್ಯಾಧಿಕಾರಿಗಳಾಗಿ ಪಂಕಜಾ:ಪದೇ ಪದೇ ವರ್ಗಾವಣೆಯಿಂದ ಅಭಿವೃದ್ಧಿಗೆ ಪೆಟ್ಟು..!

( ಗುಂಡೂರಾವ್ ಅಫಜಲಪುರ)

ಅಫಜಲಪುರ :ನ.13: ಕ್ಷೇತ್ರದಲ್ಲಿಯಂತೂ ರಾಜಕೀಯ ಇಚ್ಛಾಶಕ್ತಿ ಇದ್ದರೂ ಸಹ ಸಮಯ, ಸಂದರ್ಭಗಳು ಹಾಗೂ ಸನ್ನಿವೇಶಗಳು ಇಬ್ಬರು ಮಹಾನ್ ನಾಯಕರ ನಡುವೆ ಭಿನ್ನಮತ, ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಮೂಡಿಸುವಂತಹ ಕಾರ್ಯಗಳು ನಿರಂತರವಾಗಿ ನಡೆದಿರುವುದರಿಂದ ಕ್ಷೇತ್ರಕ್ಕೆ ಸಿಗಬೇಕಾದ ಸಚಿವ ಸ್ಥಾನ ಧಕ್ಕಲಿಲ್ಲ. ಹಿರಿಯ ಶಾಸಕರಿಗೆ ಸಂಪುಟದಲ್ಲಿ ಹಿಂದಿನ ಜೆಡಿಎಸ್, ಕಾಂಗ್ರೆಸ್ ಸರ್ಕಾರ ಸೇರಿಸಿಕೊಳ್ಳದೇ ಅನ್ಯಾಯ ಮಾಡಿತು.
ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಹಾಗೆ ನೋಡಿದರೆ ಮಾಜಿ ಸಚಿವರಿಗೆ ಸಚಿವ ಸಂಪುಟದಲ್ಲಿ ಹಿರಿತನದ ಆಧಾರದ ಮೇಲೆ ಸೇರಿಸಿಕೊಳ್ಳಬೇಕಿತ್ತು. ಆದಾಗ್ಯೂ, ವ್ಯವಸ್ಥಿತ ಸಂಚಿನಿಂದಾಗಿ ರಾಷ್ಟ್ರ ಮಟ್ಟದ ನಾಯಕರೊಬ್ಬರಿಗೆ ಸೇರಿದ ಇಬ್ಬರನ್ನು ಸಂಪುಟಕ್ಕೆ ಸೇರಿಸಿ ಅನುಭವಿ, ಮುತ್ಸದ್ದಿ ನಾಯಕರಿಗೆ ಕಡೆಗಣಿಸಲಾಯಿತು. ಆದಾಗ್ಯೂ, ಮಾಜಿ ಸಚಿವರು ಸಿದ್ಧರಾಮಯ್ಯ ಅವರ ಸಂಪುಟಕ್ಕೆ ಸೇರಿಸಿಕೊಳ್ಳಲು ಹೊರಗಿನ ಶಾಸಕರೊಬ್ಬರು ಜಾತಿ ಆಧಾರದ ಮೇಲೆ ಪ್ರಚೋದನೆ ನೀಡಿದ್ದರಿಂದ ಅವರಿಗೆ ಸಚಿವ ಸ್ಥಾನವೂ ಸಿಗಲಿಲ್ಲ. ಹೀಗಾಗಿ ಕ್ಷೇತ್ರಕ್ಕೆ ಸಚಿವ ಸ್ಥಾನ ತಪ್ಪಿದ ನಂತರ ಈಗ ಇಡೀ ಕಲಬುರ್ಗಿ ಜಿಲ್ಲೆಗೆ ಸಂಪುಟದಲ್ಲಿ ಸರ್ಕಾರದಲ್ಲಿ ಸಿಗದೇ ಅನ್ಯಾಯ ಆಗಿದೆ.
ಅದು ಏನೇ ಆದರೂ ಕಳೆದ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ಸರ್ಕಾರ ರಚನೆಯಾಯಿತು. ಆರಂಭದಲ್ಲಿ ಕೆಲವೇ ದಿನಗಳವರೆಗೆ ಮುಖ್ಯಮಂತ್ರಿಗಳಾಗಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತುಪಡಿಸುವ ಮುನ್ನವೇ ರಾಜೀನಾಮೆ ಕೊಟ್ಟರು. ಆದಾಗ್ಯೂ, ಕೆಲವೇ ಸೀಟುಗಳನ್ನು ಪಡೆದ ಜೆಡಿಎಸ್‍ನ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ ಕಾಂಗ್ರೆಸ್, ತನ್ನ ಹಿರಿಯ ಶಾಸಕ ಎಂ.ವೈ. ಪಾಟೀಲ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವಲ್ಲಿ ಸಂಪೂರ್ಣ ಕಡೆಗಣಿಸಿತು. ಶಾಸಕ ಎಂ.ವೈ. ಪಾಟೀಲ್ ಅವರು ಸಭ್ಯ ರಾಜಕಾರಣಿ. ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಶಾಸಕ ಸ್ಥಾನವೇ ತನಗೆ ಗೌರವ ಎಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರೂ ಸಹ ಅವರ ಹಿಂಬಾಲಕರು ಕೈಗೊಂಡ ಅನೇಕ ವಿವಾದಗಳು ಅವರ ಕಾರ್ಯವೈಖರಿಗೆ ತೀವ್ರ ಸಮಸ್ಯೆ ಆಗುತ್ತಿದೆ.
ರಾಜ್ಯದಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳ ಬದಲಾವಣೆಯ ರೀತಿಯಲ್ಲಿಯೇ ಕ್ಷೇತ್ರದಲ್ಲಿಯೂ ಸಹ ಮೇಲಿಂದ ಮೇಲೆ ಅಧಿಕಾರಿಗಳ ವರ್ಗಾವಣೆ ಆಗುತ್ತಿದೆ. ತಹಸಿಲ್ದಾರರ ವರ್ಗಾವಣೆಯಾಗುತ್ತಿದ್ದು, ಈಗ ತಹಸಿಲ್ದಾರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ, ಸಿಡಿಪಿಓ ವರ್ಗಾವಣೆಗಳೂ ಸಹ ಸಾಕಷ್ಟು ಪ್ರಮಾಣದಲ್ಲಿ ಚರ್ಚೆ ಆಗಿವೆ. ಹಲವು ಸಲ
ಪುರಸಭೆ ಮುಖ್ಯಾಧಿಕಾರಿಗಳ ವರ್ಗಾವಣೆ ಸಹ ವಿಪರೀತವಾಗಿದೆ. ಕೇವಲ ಅಧಿಕಾರಿಗಳ ವರ್ಗಾವಣೆ ಆಗುತ್ತಿದೆ ಹೊರತು, ಪಟ್ಟಣದ ಅಭಿವೃದ್ಧಿ ಮಾತ್ರ ಶೂನ್ಯ. ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹಾಗೂ ಶಾಸಕ ಎಂ.ವೈ. ಪಾಟೀಲ್ ಅವರೇ ಪುರಸಭೆಯ ಕಾರ್ಯವೈಖರಿಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪುರಸಭೆಯ ಸದಸ್ಯರು ಅಭಿವೃದ್ಧಿ ಪರ ಕ್ರಮಗಳನ್ನು ಕೈಗೊಳ್ಳದೇ ಕೇವಲ ಕೆಲವರ ಸ್ವಾರ್ಥಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಡೀ ಪುರಸಭೆಗೆ ಹೊರೆಯಾಗುತ್ತಿದ್ದಾರೆ.
ಪಟ್ಟಣದಲ್ಲಿ ಅನೇಕ ಒತ್ತುವರಿ ತೆರವುಗೊಳಿಸಲು ಆದೇಶ ನೀಡಿದರೂ ಸಹ ಇಲ್ಲಿಯವರೆಗಿನ ಪುರಸಭೆಯ ಮುಖ್ಯಾಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಈಗ ಪುರಸಭೆ ಮುಖ್ಯಾಧಿಕಾರಿಗಳಾಗಿ ಹೊಸದಾಗಿ ಪಂಕಜಾ ರಾವೂರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಪಂಕಜಾ ರಾವೂರ್ ಅವರು ಕಳೆದ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಬಬಲಾದ್ ಅವರನ್ನು ಮೂಲ ಹುದ್ದೆಯಾದ ವಾಡಿ ಪಟ್ಟಣದ ಹಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಪಟ್ಟಣದ ಒತ್ತುವರಿ ಹಾಗೂ ಪೌರ ಕಾರ್ಮಿಕರ ಸದ್ಬಳಕೆ ಕುರಿತು ಬಹಿರಂಗವಾಗಿ ಇಲ್ಲಿಯವರೆಗಿನ ಮುಖ್ಯಾಧಿಕಾರಿಗಳಿಗೆ ಕಠಿಣವಾಗಿ ಹೇಳಿದರೂ ಸಹ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಸಹ ಇಲ್ಲಿಯವರೆಗೆ ಕೊಟ್ಟಿಲ್ಲ.
ಪುರಸಭೆಗೆ ಸರಕಾರದ ಅನುದಾನದವನ್ನು ಸಾಕಷ್ಟು ರೀತಿ ನೀಡದೆ ಇರುವದನ್ನು ಅನುದಾನ ಕೊರತೆ ಎದ್ದು ಕಾಣುವಂತಿದೆ ಇಗಲಾದರೂ ಈಗಿನ ನೂತನ ಮುಖ್ಯಾಧಿಕಾರಿಗಳು ಸ್ಥಳಿಯ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಏನಾದರೂ ಚುನಾವಣೆಯ ಸಂದರ್ಭದಲ್ಲಿಯೇ ಪಟ್ಟಣಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಕೈಗೊಂಡರೆ ಪಟ್ಟಣದ ಅರ್ಧದಷ್ಟು ಅಭಿವೃದ್ಧಿ ತನ್ನಿಂದ ತಾನೇ ಆಗಲಿದೆ. ಅದಕ್ಕಾಗಿ ಸಾರ್ವಜನಿಕರು ಅಂತಹ ಕ್ರಮಗಳನ್ನು ನಿರೀಕ್ಷಿಸುತ್ತಿದ್ದಾರೆ.