ಅಫಜಲಪುರ ಕ್ಷೇತ್ರ; ಕುತೂಹಲ ಕೆರಳಿಸಿದ ಹೈವೋಲ್ಟೇಜ್ ಹಣಾಹಣಿ

(ವಿಶೇಷ ವರದಿ)

ಕಲಬುರಗಿ: ಏ.22: ರಾಜ್ಯ ವಿಧಾನಸಭಾ ಚುನಾವಣೆಯ ಬಿಸಿ ಇಡೀ ರಾಜ್ಯದಲ್ಲಿ ಏರುತ್ತಿರುವ ಬೆನ್ನಲ್ಲೇ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಈ ಬಾರಿ ಘಟಾನುಘಟಿ ಅಭ್ಯರ್ಥಿಗಳ ಮಧ್ಯೆ ತೀವ್ರ ಸ್ವರೂಪದ ಸೆಣಸಾಟ ಆರಂಭಗೊಂಡಿದೆ.

ಈವರೆಗೆ ಸಹಜ ರಾಜಕೀಯ ಎದುರಾಳಿಗಳು ಎಂದೇ ಗುರುತಿಸಿಕೊಂಡಿರುವ ಎಂ.ವೈ.ಪಾಟೀಲ್ ಹಾಗೂ ಮಾಲೀಕಯ್ಯ ಗುತ್ತೇದಾರ್ ಮಧ್ಯೆ ಚುನಾವಣಾ ಸಂದರ್ಭದಲ್ಲಿ ನೇರ ಹಣಾಹಣಿ ಏರ್ಪಡುತ್ತಿತ್ತು. ಈ ಇಬ್ಬರೂ ಮುಖಂಡರು ತಮ್ಮ ಸಾಂದರ್ಭಿಕ ಅಗತ್ಯಕ್ಕೆ ತಕ್ಕಂತೆ ಪಕ್ಷ ತ್ಯಜಿಸುವ ಪ್ರವೃತ್ತಿಗೆ ಹೆಸರಾಗಿರುವ ಕಾರಣಕ್ಕೆ ಪ್ರತಿ ಚುನಾವಣೆಯಲ್ಲೂ ಪ್ರಬಲ ಪ್ರತಿಸ್ಪರ್ಧಿಗಳಾಗಿ ಕಣದಲ್ಲಿರುತ್ತಿದ್ದ ಕಾರಣಕ್ಕೆ ಇವರಿಬ್ಬರ ಮಧ್ಯೆ ನೇರವಾದ ಟಕಾಫರ್ ಏರ್ಪಡುವುದು ಒಂದು ಸಂಪ್ರದಾಯ ಎನ್ನುವಂತೆ ನಡೆದುಕೊಂಡು ಬಂದಿದ್ದಿದೆ. ಆದರೆ, ಇದೇ ಮೊದಲ ಬಾರಿಗೆ ಎಂ.ವೈ ಮತ್ತು ಮಾಲೀಕಯ್ಯ ಅವರನ್ನೂ ಒಳಗೊಂಡಂತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವಕುಮಾರ್ ನಾಟಿಕಾರ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿರುವ ನಿತಿನ್ ಗುತ್ತೇದಾರ್ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್.ಡಿ.ಪಾಟೀಲ್ ಈ ಬಾರಿ ಅಫಜಲಪುರ ವಿಧಾನಸಭಾ ಕ್ಷೇತ್ರವನ್ನು ಚುನಾವಣಾ ದೃಷ್ಟಿಯಿಂದ ಕೆಂಡ ತುಂಬಿದ ಬಾಣಲೆ ಮಾಡಿಟ್ಟಿದ್ದಾರೆ ಎಂದು ಕ್ಷೇತ್ರದ ಹಿರಿಯ ಮುತ್ಸದ್ಧಿಯೊಬ್ಬರು ವ್ಯಾಖ್ಯಾನಿಸುತ್ತಾರೆ.

ಕ್ಷೇತ್ರದಲ್ಲಿ ಲಿಂಗಾಯತ, ದಲಿತ, ಕೋಲಿ (ಕಬ್ಬಲಿಗ), ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳು ನಿರ್ಣಾಯಕ ಪ್ರಮಾಣದಲ್ಲಿವೆ. ಹಾಗಾಗಿ, ಮತದಾನದ ಬಳಿಕ ಕೌಂಟಿಂಗ್ ಮುಗಿಯುವವರೆಗೆ ಯಾರ ಪಾಲಿಗೆ ಜಯಲಕ್ಷ್ಮಿ ಒಲಿಯಲಿದ್ದಾಳೆ ಎಂಬ ರಹಸ್ಯ ಕಾಯ್ದುಕೊಳ್ಳುವುದು ಈ ಕ್ಷೇತ್ರದ ವಿಶೇಷತೆ. ಏತನ್ಮಧ್ಯೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಎಂ.ವೈ.ಪಾಟೀಲ್, ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್, ಸ್ವತಃ ಹಿರಿಯಣ್ಣನ ವಿರುದ್ಧವೇ ತೊಡೆತಟ್ಟಿ ಕಣದಲ್ಲಿರುವ ಸ್ವತಂತ್ರ ಅಭ್ಯರ್ಥಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮತ್ತು ಜೆಡಿಎಸ್ ಪಕ್ಷದ ಶಿವಕುಮಾರ್ ನಾಟಿಕಾರ್ ಈ ಬಾರಿ ತಮ್ಮ ಅದೃಷ್ಟ ಪಣಕ್ಕಿಟ್ಟಿದ್ದಾರೆ. ಈ ಹೈವೋಲ್ಟೇಜ್ ಕ್ಷೇತ್ರದಲ್ಲಿ ಈಗ ಆರ್.ಡಿ.ಪಾಟೀಲ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿರುವುದು ಕ್ಷೇತ್ರದಲ್ಲಿ ಕದನ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗುವಂತೆ ಮಾಡಿದೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ನಾಮಪತ್ರ ಪರಿಶೀಲನೆಯ ವೇಳೆ ತಮ್ಮ ನಾಮಪತ್ರ ತಿರಸ್ಕøತಗೊಂಡರೂ ತಮ್ಮ ಕುಟುಂಬದ ಓರ್ವ ಅಭ್ಯರ್ಥಿ ಕಣದಲ್ಲಿ ಇರಬೇಕೆಂಬ ಲೆಕ್ಕಾಚಾರದೊಂದಿಗೆ ತಮ್ಮ ಹಿರಿಯ ಸಹೋದರ ಮಹಾಂತೇಶ್ ಪಾಟೀಲ್ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿರುವಂತೆ ಆರ್.ಡಿ.ಪಾಟೀಲ್ ನೋಡಿಕೊಂಡಿದ್ದಾರೆ. ಈಗ ಇಬ್ಬರ ನಾಮಪತ್ರವೂ ಸಿಂಧುವಾಗಿದ್ದು ಮಹಾಂತೇಶ್ ನಾಮಪತ್ರ ಹಿಂಪಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.


ಜಾತಿವಾರು ಮತದಾರರ ಮಾಹಿತಿ

ಪಂಚಮಸಾಲಿ 21,000

ಬಣಜಿಗ 11,000

ಆದಿ 7000

ಗಾಣಿಗ 6000

ಕುಡು ಒಕ್ಕಲಿಗ 5000

ಜಂಗಮ 5500

ಕೋಲಿ 37,000

ಮುಸ್ಲಿಂ 34,000

ಕುರುಬ 23,000

ದಲಿತ (ಬಲಗೈ) 22,000

ದಲಿತ (ಎಡಗೈ) 10000

ಬಂಜಾರ 11,000

ಬ್ರಾಹ್ಮಣ 2000

ಈಡಿಗ 1500

ಇತರೆ 10,000


ಕುತೂಹಲ ಕೆರಳಿಸಿದ ಆರ್.ಡಿ.ಪಾಟೀಲ್ ಸ್ಪರ್ಧೆ

ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ಕಣದಲ್ಲಿದ್ದಾಗ್ಯೂ ಅವರ ಕಿರಿಯ ಸಹೋದರ ನಿತಿನ್ ಗುತ್ತೇದಾರ್ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಮಹಾಂತೇಶ್ ಪಾಟೀಲ್ ಸೊನ್ನ ಅವರ ಸಹೋದರ ಆರ್.ಡಿ.ಪಾಟೀಲ್ ಸಹ ಈ ಬಾರಿ ಆಯ್ಕೆ ಬಯಸಿ ಸಮಾಜವಾದಿ ಪಕ್ಷದಿಂದ ಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪಾಲಿನ ಮತಗಳನ್ನೇ ಆರ್.ಡಿ.ಪಾಟೀಲ್ ಕಸಿಯುವ ಸಾಧ್ಯತೆ ಇರುವುದರಿಂದ ಈ ಬಾರಿಯ ಚುನಾವಣೆ ಎಂತಹ ಫಲಿತಾಂಶಕ್ಕೆ ಹಾದಿ ಮಾಡಿಕೊಡಲಿದೆ ಎಂಬ ಕುತೂಹಲ ಕ್ಷೇತ್ರದಾದ್ಯಂತ ಮತದಾರರನ್ನು ತುದಿಗಾಲಲ್ಲಿ ನಿಲ್ಲಿಸಿದೆ.