ಅಫಜಲಪುರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಅವಕಾಶ ಸಿಕ್ಕರೆ ರಾಜ್ಯಕ್ಕೆ ಮಾದರಿ ಮಾಡುವೆ: ಅವ್ವಣ್ಣ ಮ್ಯಾಕೇರಿ

ಅಫಜಲಪುರ :ಜ.3: ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದರೆ ಗೆದ್ದು ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಮಾಜಿ ರಾಜ್ಯ ಉಪಾಧ್ಯಕ್ಷ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರು ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೀಗಾಗಿ ನನಗೆ ಒಂದು ಅವಕಾಶ ಮಾಡಿಕೊಡಬೇಕು ಎಂದರು.
ತಾಲ್ಲೂಕು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಈ ಕ್ಷೇತ್ರವು ಸಾಕಷ್ಟು ಹಿಂದೆ ಉಳಿದಿದೆ. ಪಟ್ಟಣವು ಒಂದು ಕುಗ್ರಾಮದ ರೀತಿಯಲ್ಲಿದೆ. ಸರಿಯಾದ ಚರಂಡಿ, ಸಿಸಿ ರಸ್ತೆ, ವರ್ತುಲ ರಸ್ತೆ, ಹೈಟೆಕ್ ವಿದ್ಯುತ್ ದೀಪ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ. ನಸಿರ್ಂಗ್ ಕಾಲೇಜ್, ಮಹಿಳೆಯರಿಗೆ ಪ್ರತ್ಯೇಕ ಕಾಲೇಜ್, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಪ್ರಾರಂಭ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆದ್ದರಿಂದ ಈಗಾಗಲೇ 300ಕ್ಕೂ ಹೆಚ್ಚು ಶಾಲಾ ಕಟ್ಟಡ ಹಾಳಾಗಿದ್ದು, ಅವುಗಳು ಹೊಸದಾಗಿ ಪುನರ್ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.
ಪ್ರತಿಯೊಂದು ಶಾಲೆಯಲ್ಲಿ ವಿಶೇಷವಾಗಿ ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಮಾಡಬೇಕಾಗಿದೆ. ಅಲ್ಲದೇ ಸರ್ಕಾರದ ಸೌಲತ್ತುಗಳು ಬಲಾಡ್ಯ ಇದ್ದವರಿಗೆ ಮಾತ್ರ ತಲುಪುತ್ತಿದೆ. ಆದಾಗ್ಯೂ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಯೋಜನೆಗಳು ಅಧಿಕಾರಿಗಳು ಅವರ ಮನೆಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು 2500 ಕೋಟಿರೂ.ಗಳ ಅನುದಾನ ತಂದಿದ್ದೇವೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಸಂಗ್ರಹಿಸಿ ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದರೆ ಅಂತವರಿಗೆ ಕಾನೂನು ಮೂಲಕ ಕ್ರಮ ಕೈಗೊಳ್ಳಲು ಹೋರಾಟ ಮಾಡಲಾಗುವುದು. ಬಂದರವಾಡ್ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ರಾತ್ರಿ ವೇಳೆ ರೈತರ ಜಮೀನುಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಸಪ್ಪಣ್ಣಗೋಳ್, ಅಶೋಕ್ ದುದ್ದಗಿ, ಖಾಜಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.