ಅಫಜಲಪುರದಲ್ಲಿ ಹಸೇನ್ ಹುಸೇನ್ ದರ್ಗಾ ಉದ್ಘಾಟನೆ ಮಳೇಂದ್ರ ಸಂಸ್ಥಾನ ಹಿರೇಮಠದಿಂದ ಗೇಟ್ ನಿರ್ಮಾಣ

ಅಫಜಲಪುರ:ಜು.29: ಭಾರತ ಅನೇಕ ಧರ್ಮಗಳಿಂದ ಕೂಡಿದ ಭಾವೈಕ್ಯದ ಸಂಕೇತವಾಗಿದೆ. ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ವಿಶ್ವಾಸ ಹಾಗೂ ಬಾಂಧವ್ಯವನ್ನು ಬೆಸೆಯುತ್ತವೆ ಎಂದು ಹೆಚ್.ಕೆ.ಇ ನಿರ್ದೇಶಕ ಅರುಣಕುಮಾರ ಎಂ.ವೈ.ಪಾಟೀಲ್ ತಿಳಿಸಿದರು.

ಪಟ್ಟಣದ ತಳಕೇರಿ ಬಡಾವಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಹಸೇನ್ ಹುಸೇನ್ ದರ್ಗಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುರಾತನ ಕಾಲದ ಈ ಮಸೀದಿ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಅನೇಕ ವರ್ಷಗಳ ಬೇಡಿಕೆ ಇತ್ತು. ಇದನ್ನು ನಮ್ಮ ತಂದೆಯವರಾದ ಶಾಸಕ ಎಂ.ವೈ.ಪಾಟೀಲ್ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಅನುದಾನವನ್ನು ಒದಗಿಸಿದ್ದಾರೆ. ಈ ಬಡಾವಣೆಯಲ್ಲಿ ಈ ಹಿಂದೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಇನ್ನುಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.

ಸಾನಿಧ್ಯ ವಹಿಸಿದ ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಅನ್ಯಾಯ, ಅಧರ್ಮದ ನಿರ್ಮೂಲನೆಗೆ ಶ್ರಮಿಸಿದರು. ಕೋಮು ಸೌಹಾರ್ದತೆ ಸಾರಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ. ಅವರ ಸಂದೇಶ ಹಾಗೂ ತತ್ವದ ಅನುಕರಣೆಯಿಂದ ಮನುಕುಲದ ಒಳಿತಾಗಲು ಸಾಧ್ಯವಿದೆ. ಮೊಹರಂ ಹಬ್ಬವು ನಾವೆಲ್ಲರೂ ಕೂಡಿಕೊಂಡು ಆಚರಣೆ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ. ಹಸೇನ್ ಹುಸೇನ್ ದರ್ಗಾದ ಗೇಟ್ ಬೇಡಿಕೆ ಇರುವುದರಿಂದ ನಮ್ಮ ಶ್ರೀ ಮಠದಿಂದ ನಿರ್ಮಾಣ ಮಾಡಿ ಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಫಾದರ್, ಸಂಗ್ರಾಮಗೌಡ ಪಾಟೀಲ್, ನಾನಾಸಾಹೇಬ್ ಪಾಟೀಲ್, ಶಿವಪುತ್ರಪ್ಪ ಸಂಗೋಳಗಿ, ಚಂದ್ರಶೇಖರ್ ಕರಜಗಿ, ಸಿದ್ದಾರ್ಥ ಬಸರಿಗಿಡ, ಶಂಕರ ಸೋಬಾನಿ, ರವೂಫ್ ಪಟೇಲ್, ಕಂಟೆಪ್ಪ ಬಳೂರ್ಗಿ, ಸೈಫನಸಾಬ ಚಿಕ್ಕಅಳ್ಳಗಿ, ಖಾಲೀಬ ಮುಜಾವರ, ಮಶಾಕ ಮಡ್ನಳ್ಳಿ, ರಹೀಮ್ ಖೇಡಗಿ ಅನೇಕರಿದ್ದರು.


ಶಾಸಕ ಎಂ.ವೈ. ಪಾಟೀಲ್ ಹಾಗೂ ಅರುಣಕುಮಾರ ಪಾಟೀಲ್ ಅವರು ತಳಕೇರಿ ಬಡಾವಣೆಗೆ ಹೆಚ್ಚಿನ ಅನುದಾನ ನೀಡಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. 6 ಬಾರಿ ಶಾಸಕರಾದವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಖಬರಸ್ತಾನ್ ಕಂಪೌಂಡ್, ಹೈ ಮಾಸ್ಟ್ ವಿದ್ಯುತ್ ದೀಪ, ಸಿಸಿ ರಸ್ತೆ, ಹಸೇನ್ ಹುಸೇನ್ ದರ್ಗಾ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳು ಮಾಡಿದ್ದಾರೆ.

  • ಮತೀನ್ ಪಟೇಲ್, ಜಿ.ಪಂ ಮಾಜಿ ಸದಸ್ಯರು ಅಫಜಲಪುರ