
ಅಫಜಲಪುರ :ಫೆ.25: ಪಟ್ಟಣದ ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರದಿಂದ ಗುಡ್ಡಾಪುರ ದಾನಮ್ಮ ಕುರಿತು ವಿಶೇಷ ಪುರಾಣ ಕಾರ್ಯಕ್ರಮ ಆರಂಭಗೊಂಡಿದೆ. ಹೀಗಾಗಿ ಎಲ್ಲ ಭಕ್ತರು ಆಗಮಿಸಿ ಪುರಾಣ ಆಲಿಸಬೇಕು ಎಂದು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಭಕ್ತರ ಬಹುದಿನಗಳ ಆಶಯದಂತೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಮಾರ್ಚ್ 1ರಿಂದ 8ರವರೆಗೆ ಕಾರ್ಯಕ್ರಮಗಳು ಶ್ರೀಮಠದಲ್ಲಿ ದಿನನಿತ್ಯ ನಡೆಯಲಿವೆ. ಮಾರ್ಚ್ 5ರಂದು ಬಸವೇಶ್ವರ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಮಾರ್ಚ್ 6ರಂದು ತಾಲ್ಲೂಕಿನ ಹತ್ತು ಸಾವಿರ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಆ ಕಾರ್ಯಕ್ರಮಕ್ಕೆ ಕಾಶಿ ಜಗದ್ಗುರುಗಳು ಆಗಮಿಸುವರು. ಮಾರ್ಚ್ 8ರಂದು ಉಜ್ಜಯಿನಿ ಜಗದ್ಗುರುಗಳು ಆಗಮಿಸುವರು. ಮಾರ್ಚ್ 9ರಂದು ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನೆರವೇರಲಿದೆ ಎಂಧುಅ ವರು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾರ್ಚ್ 10ರಂದು ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ಪಾಲ್ಗೊಳ್ಳುವರು. ಸಂಜೆ ಯುವ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮುಖಂಡ ಡಾ. ಸಂಜೀವಕುಮಾರ್ ಎಂ.ವೈ. ಪಾಟೀಲ್ ಅವರು ಮಾತನಾಡಿ, ಈ ಭಾಗದ ನಡೆದಾಡುವ ದೇವರು ಶ್ರೀ ಮಳೇಂದ್ರ ಶಿವಾಚಾರ್ಯರ ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮಠಾಧೀಶರು, ಎಲ್ಲ ರಾಜಕೀಯ ನಾಯಕರು ಆಗಮಿಸುವರು. ಪವಿತ್ರವಾದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಕಾಂತ್ ಕಲಕೇರಿ, ಗಂಗಾಧರ್ ಶ್ರೀಗಿರಿ, ಸುನೀಲ್ ಶೆಟ್ಟಿ, ಅನಿಲ್ ಕಾಚಾಪುರ, ಶರಣು ಭೂಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.