ಅಫಜಲಪುರದಲ್ಲಿ ಭವ್ಯವಾದ ಈದಗಾ ಸ್ಥಾಪನೆಗೆ ಚಾಲನೆ

ಅಫಜಲಪುರ:ನ.17: ತಾಲೂಕಿನ ಮುಸ್ಲೀಂ ಸಮಾಜ ಬಾಂಧವರ ಆರು ದಶಕಗಳ ಕನಸು ಇಂದು ಈಡೇರಿದಂತಾಗಿದೆ. ಪಟ್ಟಣದ ಮಸ್ಜಿದ್ ಎ ಮಹಲ್ ಹತ್ತಿರ ಹಿರಿಯ ನ್ಯಾಯವಾದಿ ಹಾಗೂ ಅಫಜಲ್ ಖಾನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮಕ್ಸೂದ್ ಅಫಜಲ್ ಜಾಗೀರದಾರ ಅವರು ತಮ್ಮ ಸ್ವಂತ ಜಮೀನು ಸ.ನಂ.641 ರಲ್ಲಿ ಎರಡುವರೆ ಎಕರೆ ಪ್ರದೇಶದಲ್ಲಿ ನೂತನ ಈದಗಾ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಹುದಿನಗಳಿಂದ ಪಟ್ಟಣದಲ್ಲಿ ರಂಜಾನ್ ಹಾಗೂ ಬಕ್ರೀದ್ ಹಬ್ಬಗಳಂದು ಮುಸ್ಲೀಂ ಬಾಂಧವರಿಗೆ ಈದಗಾ ಮೈದಾನ ಸ್ಥಾಪನೆಯಾಗಬೇಕೆಂಬ ಇಚ್ಛೆ ಇತ್ತು. ಅದರಂತೆ ಅಫಜಲ್ ಖಾನ್ ವಂಶಸ್ಥರಾದ ತಾವು ತಮ್ಮ ಸ್ವಂತ ಜಮೀನಿನಲ್ಲಿ ಈದಗಾ ಕಟ್ಟಡ ಮಾಡಲು ಮುಂದಾಗಿದ್ದು, ಬರುವ ದಿನಗಳಲ್ಲಿ ಪಟ್ಟಣದ ಹಾಗೂ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿರುವ ಸಮಾಜ ಬಾಂಧವರಿಗೆ ಅನೂಕೂಲವಾಗಲಿದೆ ಎಂದು ತಿಳಿಸಿದರು.

ಈಗಾಗಲೇ ಪಾಳು ಬಿದ್ದ ಅಫಜಲ್ ಖಾನ್ ಅವರು ಕಟ್ಟಿಸಲಾದ ಮಹಲ್ ನವೀಕರಣ ಮಾಡಲಾಗಿದೆ. ಹೀಗಾಗಿ ಈಗ ದಿನನಿತ್ಯ ನಮಾಜ್ (ಪ್ರಾರ್ಥನೆ) ನಡೆಯುತ್ತಿದೆ. ಸಮಾಜ ಬಾಂಧವರಿಗೆ ಇದರಿಂದ ಅನೂಕೂಲವಾಗಿದೆ. ಮಹಲ್ ಹತ್ತಿರ ಈದಗಾ ಸ್ಥಾಪನೆ ಮಾಡಬಾರದು. ಈದಗಾ ಮೈದಾನ್ ಬೇರೆ ಕಡೆ ಮಾಡಬೇಕೆಂಬ ಇಚ್ಛೆ ಕೆಲವು ಜನ ಹಿರಿಯರಲ್ಲಿತ್ತು. ಆದರೆ ಅಫಜಲ್ ಖಾನ್ ವಾಸಿಸಿದ ಈ ಪ್ರದೇಶದಲ್ಲಿ ಇಂದು ಅವರ ವಂಶಸ್ಥರಾದ ತಾವು ಬೇರೆ ಕಡೆ ಏಕೆ? ಇಲ್ಲಿಯೇ ಮಾಡಿದರೆ ಮತ್ತಷ್ಟು ಅನೂಕೂಲವಾಗಲಿದೆ ಎನ್ನುವ ಆಶಾಭಾವನೆ ತಮ್ಮದಾಗಿದ್ದರಿಂದ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದರು.

ಅಲ್ಲದೆ ಅಫಜಲ್ ಖಾನ್ ಅವರನ್ನು ಕ್ರೂರಿ ಎಂದು ತೋರಿಸುವ ಈ ಸಮಯದಲ್ಲಿ ಇತಿಹಾಸ ಗೊತ್ತಿಲ್ಲದ ಕೆಲವು ಜನರಿಂದ ಅವರ ಹೆಸರಿಗೆ ಕಳಂಕ ತರುವ ಕೆಲಸ ನಡೆದಿದೆ. ಇವರ ಬಗ್ಗೆ ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯ ಡಾ. ಸತೀಶ ಕದಮ್ ಅವರು ಅಫಜಲ್ ಖಾನ್‍ರ ಜೀವನ ಸಾಧನೆಗಳನ್ನು ಅಧ್ಯಯನ ಮಾಡುವ ಕಾಲವಿದು ಎಂದು ಹೇಳಿದ್ದಾರೆ. ಅವರ ವಂಶಸ್ಥರಾದ ತಾವು ಅವರ ಸಾಧನೆಗಳನ್ನು ಕಾಪಾಡಿಕೊಂಡು ಬಂದಿದ್ದು, ಸೊಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ ಎಂದು ತಿಳಿಸಿದರು.

ಈದಗಾ ಮೈದಾನದ ಕಟ್ಟಡ ಕಾಮಗಾರಿಯ ಸಂಪೂರ್ಣ ಖರ್ಚು ವೆಚ್ಚ ಸ್ವಂತ ತಾವೇ ಮಾಡುತ್ತಿದ್ದು, ಈ ಕಾರ್ಯಕ್ಕೆ ಪ್ರೇರಣೆ ಕೊಟ್ಟ ಸಹೋದರ ಇಮ್ತಿಯಾಜ್ ಜಾಗೀರದಾರ ಅವರಿಗೆ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ತಾಹೀರ್ ಮಣ್ಣೂರ, ಕೆ.ಡಿ.ಪಟೇಲ್, ಮಂಜೂರ ಅಹ್ಮದ ಅಗರಖೇಡ, ಹಸನ್ ಅಫಜಲ್ ಜಾಗೀರದಾರ, ಖಾಜಾ ಪಟೇಲ್, ಶೇರ್ ಅಲಿ ಬೇಗ, ಜಮೀಲ್ ಗೌಂಡಿ, ಶಹೇಬಾಜ್ ಬೇಗ, ರವೂಫ್ ಪಟೇಲ್, ಇಲಾಹಿ ಶಿಲೇದಾರ, ಚಾಂದಸಾಬ ಸೊನ್ನ, ಶಿರಾಜ್ ಪೀರಾಂವಾಲೆ, ಜಹೀರ್ ಪಟೇಲ್, ಬಾಬು ಮನಿಯಾರ, ಇಬ್ರಾಹೀಂಸಾಬ ಚೌಧರಿ, ಮಹಿಬೂಬ್ ಬಳೂಂಡಗಿ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು. ಮುಖಂಡರಾದ ರವೂಫ್ ಪಟೇಲ್ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.