
ಅಫಜಲಪುರ:ಎ.9: ರಾಜ್ಯದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಅಂಗವಾಗಿ ಏಪ್ರಿಲ್ 6ರಂದು ಕಾಂಗ್ರೆಸ್ ಪಕ್ಷದಿಂದ 2ನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ.
ಅದೇ ರೀತಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆಯವರ ತವರು ಕ್ಷೇತ್ರವಾದ ಕಲಬುರಗಿ ಜಿಲ್ಲೆಯಲ್ಲೂ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾಗಿರುವ ಎಂ.ವೈ.ಪಾಟೀಲ್ ಅವರು ವಯಸ್ಸಿನ ಕಾರಣದಿಂದಾಗಿ ಚುನಾವಣೆಗೆ ನಿಲ್ಲೋದಿಲ್ಲ ಎಂದು ಘೋಷಣೆ ಮಾಡಿ ಜನಮನ್ನಣೆ ಗಳಿಸಿದ ಯುವಕರಿಗೆ ಟಿಕೆಟ್ ನೀಡಿ ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದರು.
ಆದರೆ ಕ್ಷೇತ್ರದಲ್ಲಿ ಒಟ್ಟು 7 ಜನ ಟಿಕೆಟ್ ಆಕಾಂಕ್ಷಿಗಳು ಇದ್ದರೂ ಸಹ ಮತ್ತೆ ಹಾಲಿ ಶಾಸಕರಿಗೆ ಘೋಷಣೆ ಮಾಡುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಸಿಡಿದೆದ್ದು ಟಿಕೆಟ್ ಬೇಡ ಎಂದು ಹೇಳಿದ್ರು ಕೂಡ ಅವರಿಗೆ ಟಿಕೆಟ್ ನೀಡಿದಾಗ ನಮಗೆ ಇಲ್ಲಿ ಏನು ಕೆಲಸ ಎಂದು ಅಸಮಾಧಾನಗೊಂಡು ಟಿಕೆಟ್ ಆಕಾಂಕ್ಷಿಗಳಾದ ಮಕ್ಬೂಲ್ ಪಟೇಲ್ ಮತ್ತು ರಾಜೇಂದ್ರ ಪಾಟೀಲ್ ರೇವೂರ ಸೇರಿದಂತೆ ತಾಪಂ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಜಿಪಂ ಮಾಜಿ ಸದಸ್ಯ ಸಿದ್ದಯ್ಯ ಸ್ವಾಮಿ ಹಿರೇಮಠ, ನಾಗೇಶ್ ಕೊಳ್ಳಿ, ಭಾಷಾ ಪಟೇಲ್ ಹಸರಗುಂಡಗಿ ಸೇರಿದಂತೆ ಇನ್ನಿತರ ಮುಖಂಡರು ಸೇರಿಕೊಂಡು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಭೆ ಕರೆದು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಶಾಸಕ ಎಂ.ವೈ.ಪಾಟೀಲ್ ಹಾಗೂ ಮಾಜಿ ಶಾಸಕ ಮಾಲಿಕಯ್ಯಾ ಗುತ್ತೇದಾರ್ ಅವರನ್ನು ಹೊರತುಪಡಿಸಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಡೋಣ ಎಂದು ತೀರ್ಮಾನಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಸಡ್ಡು ಹೊಡೆದಿದ್ದಾರೆ.
ಅದೇ ರೀತಿ ಇನ್ನೊರ್ವ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಜೆ.ಎಂ.ಕೊರಬು ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿದೆ.