
ಬೀದರ್:ಜು.15: ‘ಕಾನೂನಿನ ಪ್ರಕಾರ 18 ವರ್ಷದ ಕೆಳಗಿನ ಯುವಕರಿಗೆ ವಾಹನ ಚಾಲನಾ ಪರವಾನಿಗೆ ಪತ್ರ (ಡ್ರೈವಿಂಗ್ ಲೈಸೆನ್ಸ್) ನೀಡುವ ಅವಕಾಶವಿಲ್ಲ. ಹೀಗಾಗಿ ಅಪ್ರಾಪ್ರ ವಯಸ್ಕರು ಒಂದು ವೇಳೆ ವಾಹನ ಚಲಾಯಿಸಿದರೆ ಅವರ ಪೋಷಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದಕಾರಣ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ವಾಹನ ಚಾಲನಾ ಪರವಾನಿಗೆ ಪತ್ರ ಪಡೆಯುವವರೆಗೂ ವಾಹನ ಚಲಾಯಿಸಬಾರದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚೆನ್ನಬಸವಣ್ಣ ಎಸ್.ಎಲ್. ಸಲಹೆ ಮಾಡಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಮಾಮನಕೇರ ಸಮೀಪ ಇರುವ ಜ್ಞಾನಸುಧಾ ವಿದ್ಯಾಲಯದಲ್ಲಿ ಶುಕ್ರವಾರ (ದಿ. 14/07/2023) ಆಯೋಜಿಸಿದ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಸ್ತೆ ಅಪಘಾತ ಪ್ರಕರಣಗಳಲ್ಲಿ ಇಡೀ ಜಗತ್ತಿನಲ್ಲಿ ಭಾರತ ಮೊದಲನೆ ಸ್ಥಾನದಲ್ಲಿ ಇದ್ದರೆ. ಇಡೀ ದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯ ಮೂರನೆಯ ಸ್ಥಾನದಲ್ಲಿ ಇದೆ. ಬೀದರ್ ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 332 ಜನರು ರಸ್ತೆ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷ ಜೂನ್ ವರೆರೆ 172 ಪ್ರಯಾಣಿಕರು ಮೃತಪಟ್ಟರಿಸಿದ್ದಾರೆ. ರಸ್ತೆ ಸಂಚಾರ ನಿಯಮಗಳು ಪಾಲನೆ ಮಾಡದ ಕಾರಣ ರಸ್ತೆ ಅಪಘಾತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿವೆ. ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವುದಿಲ್ಲ. ಈ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿಯಿಂದ ವಾಹನ ಸವಾರರು ರಸ್ತೆ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳ ತಮ್ಮ ತಮ್ಮ ಪಾಲಕರಿಗೆ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ತಪ್ಪದೇ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಬೇಕು. ಯಾವುದೇ ಕಾರಣಕ್ಕೂ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದ ಮೇಲೆ ಹಾಗೂ ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಓಡಾಡಲು ಅವಕಾಶ ಮಾಡಿಕೊಡಬಾರದು. ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವಂತೆ ಒತ್ತಾಯ ಮಾಡಬೇಕು’ ಎಂದು ಹೇಳಿದರು.
ಮದ್ಯ ಪಾನ ಮಾಡಿ ವಾಹನ ಚಲಾಯಿಸಬಾರದು, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು, ನಿಗದಿತ ವೇಗದ ಮಿತಿಯಲ್ಲಿ ವಾಹನ ಚಲಾಯಿಸಬೇಕು, ಏಕಮುಖ ಸಂಚಾರದಲ್ಲಿ ನಿಯಮ ಮೀರಿ ಎದರಿನಿಂದ ವಾಹನ ಚಲಾಯಿಸಬಾರದು, ರಸ್ತೆ ಸುರಕ್ಷತೆ ಫಲಕಗಳನ್ನು ತಪ್ಪದೇ ಅನುಸರಿಸಬೇಕು, ರಸ್ತೆಯಲ್ಲಿ ಓಡಾಡುವಾಗ ಎಚ್ಚರಿಕೆಯಿಂದ ಇರಬೇಕು, ವಾಹನ ಚಲಾಯಿಸುವಾಗ ಅಗತ್ಯ ಸ್ಥಳದಲ್ಲಿ ಇಂಡಿಕೇಟರ್ ತಪ್ಪದೇ ಹಾಕಬೇಕು, ಸಾಮಾಥ್ರ್ಯಕ್ಕಿಂತ ಹೆಚ್ಚಿನ ಲೋಡ್ ತುಂಬಿಸಿ ಚಲಾಯಿಸಬಾರದು, ಸಾಮಾಥ್ರ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಸಿ ಚಲಾಯಿಸಬಾರದು, ಸುರಕ್ಷೆ ಪಾಲಿಸಿ ಓವರ್ ಟೇಕ್ ಮಾಡಬೇಕು, ದ್ವಿಚಕ್ರದಲ್ಲಿ ಮೂವರು ಹೋಗಬಾರದು, ವಾಹನದ ಮಧ್ಯ ಸರಿಯಾದ ಅಂತರ ಕಾಪಾಡಿಕೊಳ್ಳಬೇಕು, ಅತಿವೇಗವಾಗಿ ವಾಹನ ಚಲಾಯಿಸಬಾರದು, ರಸ್ತೆ ಸುರಕ್ಷತೆ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ವಿದ್ಯಾರ್ಥಿಗಳು ತಮ್ಮ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ರಸ್ತೆ ಅಪಘಾತದ ನಂತರದ ಮೊದಲ ಗಂಟೆಯನ್ನು “ಗೊಲ್ಡನ್ ಅವರ್”À ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮೊದಲ 60 ನಿಮಿಷದಲ್ಲಿ ಪ್ರಥಮ ಚಿಕಿತ್ಸೆ ತ್ವರಿತ ವೈದ್ಯಕೀಯ ಆರೈಕೆ ನೀಡಿದರೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಬದುಕುಳಿಯುವ ಸಾಧ್ಯತೆ ಇರುತ್ತದೆ. ಅಲ್ಲದೇ ಅವರ ಗಾಯಗಳ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿರುತ್ತದೆ. ಹೀಗಾಗಿ ರಸ್ತೆ ಅಪಘಾತ ಆಗಿರುವುದನ್ನು ನೋಡಿದ ಕೂಡಲೇ ಗಾಯಾಳುಗಳಿಗೆ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿ. ಈ ರೀತಿ ಸಹಾಯ ಮಾಡಿದವರಿಗೆ ಕಾನೂನಿನಲ್ಲಿ ಯಾವುದೆ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಜ್ಞಾನಸುಧಾ ವಿದ್ಯಾರ್ಥಿಗಳು ಜಾಣರು: ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚೆನ್ನಬಸವಣ್ಣ ಅವರು ಮಾತನಾಡುತ್ತಾ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳು ಸರಿಯಾದ ಉತ್ತರವನ್ನು ಹೇಳಿದ ಕಾರಣ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳು ಬಹಳ ಜಾಣವಂತರು, ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಅತ್ಯುತ್ತವಾಗಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಕಾಯಕ್ರಮದಲ್ಲಿ ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಅವರು ಮಾತನಾಡಿ, ‘ರಸ್ತೆ ಸಂಚಾರ ನಿಯಮಗಳು ತಪ್ಪದೇ ಪಾಲನೆ ಮಾಡುವಂತೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಮನವರಿಕೆ ಮಾಡಿ ಅವರ ಮನಸ್ಥಿತಿ ಬದಲಾಯಿಸಬೇಕು. ರಸ್ತೆ ಸಂಚಾರ ನಿಯಮಗಳು ಉಲ್ಲಂಘನೆ ಮಾಡಿದಾಗ ಪೊಲೀಸರು ನಮ್ಮ ಜೀವ ರಕ್ಷಣೆಗಾಗಿ ದಂಡ ವಿಧಿಸುತ್ತಾರೆ. ಆದ್ದರಿಂದ ನಿಯಮಗಳು ಉಲ್ಲಂಘನೆ ಮಾಡದಂತೆ ತಿಳಿ ಹೇಳಬೇಕು ಎಂದು ಸಲಹೆ ಮಾಡಿದರು.
ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಚನ್ನವೀರ ಪಾಟೀಲ್, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ ಉಪಸ್ಥಿತರಿದ್ದರು.