ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ತಂದೆ ಸೆರೆ

ಬೆಂಗಳೂರು,ಮಾ.೩೧- ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಹಾಗೂ ಬೆದರಿಕೆ ಹಾಕಿದ ಆರೋಪಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸಂಪಿಗೆಹಳ್ಳಿಯ ಮೊಹಮ್ಮದ್ ಶಬ್ಬೀರ್ (೩೬) ಬಂಧಿತ ಆರೋಪಿಗಳಾಗಿದ್ದಾನೆ. ಆಟೋ ಚಾಲಕನಾಗಿದ್ದ ಆರೋಪಿಗೆ ಇಬ್ಬರು ಪತ್ನಿಯರಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಬ್ಬೀರ್ ನ ಎರಡನೇ ಪತ್ನಿ ಆ ವೇಳೆ ಹೆರಿಗೆಗಾಗಿ ಆಸ್ಪತ್ರೆಯಲ್ಲಿದ್ದರು.
ಈ ಮಧ್ಯೆ ತನ್ನ ಮೊದಲ ಪತ್ನಿಯ ಪುತ್ರಿ ೧೫ ವರ್ಷದ ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಆರೋಪಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆ ರೀತಿ ದೌರ್ಜನ್ಯ ಎಸಗಿದ್ದು ಮಾತ್ರವಲ್ಲದೆ ಈ ಸಂಬಂಧ ಯಾವ ವಿಚಾರವನ್ನೂ ಹೊರಗೆ ಯಾರೊಡನೆ ಹೇಳಬಾರದೆಂದು ಬಾಲಕಿಗೆ ಬೆದರಿಕೆ ಹಾಕಿದ್ದ.
ಆದರೆ ಕೆಲವು ದಿನಗಳ ಹಿಂದೆ, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವೇಳೆ ಆಕೆ ಗರ್ಭಿಣಿಯಾಗಿರುವುದು ಕಂಡುಬಂದಿದೆ. ಆಗ ಆ ಬಾಲಕಿ ತನ್ನ ತಂದೆ ತನ್ನ ಮೇಲೆ ನಡೆಸಿದ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾಳೆ.ಶಬ್ಬೀರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.