ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಜೈಲು

ಕಲಬುರಗಿ,ಸೆ.4-ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷ ಜೈಲು ಹಾಗೂ 20 ಸಾವಿರ ರೂ.ದಂಡ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೊ) ನ್ಯಾಯಾಲಯ ತೀರ್ಪು ನೀಡಿದೆ.
ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗೊಳಗಿ (ಸಿ) ಗ್ರಾಮದ ನಾಗಪ್ಪ ಅಲಿಯಾಸ್ ನಾಗರಾಜ ಅಲಿಯಾಸ್ ನಾಗೇಂದ್ರಪ್ಪ ಷಣ್ಮುಖಪ್ಪ ಶಿಕ್ಷೆಗೊಳಗಾದ ಆರೋಪಿ.
2020ರ ಮೇ.8 ರಂದು ಆಳಂದ ತಾಲ್ಲೂಕಿನ ಸಂಗೊಳಗಿ (ಸಿ) ಗ್ರಾಮದ ಆರೋಪಿ ನಾಗಪ್ಪ ಅದೇ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಬೈಕ್ ಮೇಲೆ ಅಪಹರಿಸಿಕೊಂಡು ಮರಗೋಳ ಗ್ರಾಮಕ್ಕೆ ಕರೆದೊಯ್ದು ಸಂಬಂಧಿಕರ ಮನೆಯಲ್ಲಿದ್ದು ಮದುವೆಯಾಗುವುದಾಗಿ ಒತ್ತಾಯಪೂರ್ವಕವಾಗಿ ಅತ್ಯಾಚಾರವೆಸಗಿದ್ದ. ಈ ಬಗ್ಗೆ ಬಾಲಕಿಯ ಪೋಷಕರು ಆತನ ವಿರುದ್ಧ ನರೋಣಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಆಗ ಆಳಂದ ಸಿಪಿಐ ಆಗಿದ್ದ ಶಿವಾನಂದ ಗಾಣಿಗೇರ ಅವರು ಐಪಿಸಿ ಕಲಂ 363, 366 (ಎ), 376 (ಎನ್) ಅಡಿ ದೂರು ದಾಖಲಿಸಿಕೊಂಡು ಪೋಕ್ಸೊ ಕಾಯ್ದೆಯಡಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕಳೆದ ಆಗಸ್ಟ್ 30 ರಂದು ವಿಶೇಷ ಪೋಕ್ಸೊ ನ್ಯಾಯಾಲಯದ ಎಫ್.ಟಿ.ಎಸ್.ಸಿ-1 ನ್ಯಾಯಾಧೀಶ ಯಮನಮಪ್ಪ ಬಮ್ಮಣಗಿ ವಿಚಾರಣೆ ನಡೆಸಿ ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳು ರುಜುವಾದ ಹಿನ್ನೆಲೆಯಲ್ಲಿ ಕಾರಾಗೃಹ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
20 ವರ್ಷ ಕಾರಾಗೃಹ ಶಿಕ್ಷೆ, 20 ಸಾವಿರ ದಂದಡ ಜೊತೆಗೆ ಕಲಂ ಐಪಿಸಿ 363 ಅಡಿ 3 ವರ್ಷ ಕಾರಾಗೃಹ ಶಿಕ್ಷೆ, 6 ಸಾವಿರ ದಂಡ ಕೊಡಬೇಕು ತಪ್ಪಿದಲ್ಲಿ 3 ತಿಂಗಳು ಸಾಧಾ ಶಿಕ್ಷೆ ವಿಧಿಸಲಾಗಿದೆ. ಕಾನೂನು ಪ್ರಾಧಿಕಾರದಿಂದ ನೊಂದ ಬಾಲಕಿಗೆ 4 ಲಕ್ಷ ರೂ.ತಿಂಗಳೊಳಗಾಗಿ ಪರಿಹಾರ ನೀಡಬೇಕು ಎಂದು ಸಹ ಆದೇಶ ಮಾಡಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದ ಮಂಡಿಸಿದ್ದರು.